ಬೆಂಗಳೂರು: ಉಪ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಅನರ್ಹ ಶಾಸಕರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಗುಪ್ತ ಸಭೆ ನಡೆಸಿದರು.
ಸದಾಶಿವ ನಗರದ ಬಳಿಯಿರುವ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಬಿ ಸಿ ಪಾಟೀಲ್, ಮುನಿರತ್ನ, ಸೋಮಶೇಖರ್, ಆರ್,ಶಂಕರ್, ನಾರಾಯಣ ಗೌಡ, ಸುಧಾಕರ್, ಹೆಚ್ ವಿಶ್ವನಾಥ್, ಬೈರತಿ ಬಸವರಾಜು, ಗೋಪಾಲಯ್ಯ ಹಾಗೂ ರೋಶನ್ ಬೇಗ್ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.
ಅನರ್ಹ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಗುಪ್ತ ಸಭೆ ಮಧ್ಯಾಹ್ನ 3 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಜೊತೆಗೆ ವಿವಿಧ ನಿಯೋಗಗಳ ಭೇಟಿಗೆ ಸಮಯ ನಿಗದಿ ಆಗಿತ್ತು. ಆದರೆ ಅದನ್ನು ಬದಿಗೊತ್ತಿ, ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಅನರ್ಹರ ಮುಂದಿನ ನಡೆಗಳೇನಿರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಕಾನೂನು ಹೋರಾಟ ಕುರಿತು ಮಹತ್ವದ ಚರ್ಚೆ:
ಈಗಾಗಲೇ ಉಪ ಚುನಾವಣೆ ದಿನಾಂಕ ಅ. 21ಕ್ಕೆ ಘೋಷಣೆಯಾಗಿರುವುದರಿಂದ ಅನರ್ಹ ಶಾಸಕರ ಮುಂದಿನ ಕಾನೂನು ಹೋರಾಟದ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ. ಇದಕ್ಕಾಗಿಯೇ ಸಭೆಗೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿಯವರನ್ನು ಕರೆಸಿಕೊಂಡು ಕಾನೂನು ಸಲಹೆ ಪಡೆದಿದ್ದಾರೆ. ಅಲ್ಲದೆ ಸಭೆಗೆ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಕೂಡ ಬಂದಿದ್ದರು. ಕಾನೂನು ಹೋರಾಟದ ಕುರಿತು ಮಾಧುಸ್ವಾಮಿಯಿಂದ ಅಭಿಪ್ರಾಯ ಪಡೆಯಲಾಗಿದೆ.