ಬೆಂಗಳೂರು : ಬೃಂದಾವನ ಪ್ರಾಪರ್ಟಿಸ್ ಕಂಪನಿಯಿಂದ ಸಾವಿರಾರು ಜನರಿಗೆ ವಂಚಿಸಿದ ಆರೋಪ ಪ್ರಕರಣದ ಸಂಬಂಧ ಇಂದು ಇಡೀ ದಿನ ರಾಜಾಜಿನಗರ ಪೊಲೀಸ್ ಠಾಣೆ ಮುಂದೆ ಸಂತ್ರಸ್ತರು ಜಮಾಯಿಸಿದ್ದರು. ನೂರಾರು ಸಂಖ್ಯೆಯಲ್ಲಿ ಠಾಣೆ ಮುಂಭಾಗ ಜಮಾಯಿಸಿರುವ ವಂಚನೆಗೊಳಗಾದ ಜನ ಬೃಂದಾವನ ಪ್ರಾಪರ್ಟಿಸ್ ಮಾಲೀಕನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜಾಜಿನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿರುವ ವಂಚನೆಗೊಳಗಾದವರು.. ಬೃಂದಾವನ ಪ್ರಾಪರ್ಟಿ ಮಾಲೀಕ ದಿನೇಶ್ ಗೌಡ ಐದು, ಆರು ಲಕ್ಷಕ್ಕೆ ಸೈಟ್ ನೀಡುವುದಾಗಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿರುವ ಆರೋಪ ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು. ಕಳೆದ ಐದು ವರ್ಷಗಳಿಂದ ಹಣ ಹೂಡಿಕೆ ಮಾಡಿಕೊಂಡಿರುವ ದಿನೇಶ್ ಈಗ ರಾಜಾಜಿನಗರ ಬಳಿಯ ಬೃಂದಾವನ ಪ್ರಾಪರ್ಟಿ ಕಚೇರಿಗೆ ಬಾಗಿಲು ಹಾಕಿ ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ.
ಹಣ ಹೂಡಿಕೆ ಮಾಡಿರುವ ಸಾರ್ವಜನಿಕರು ಬೆಳಗ್ಗೆಯಿಂದಲೇ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಬಡವರು, ಚಾಲಕರು, ಪ್ಲಂಬರ್, ಹೋಟೆಲ್ ಸಪ್ಲೈಯರ್ಗಳು ಹಣ ಹೂಡಿಕೆ ಮಾಡಿದ್ದು, ತಾವರೆಕೆರೆ, ಹೆಸರಘಟ್ಟ, ನೆಲಮಂಗಲ ಕಡೆ ಆರೋಪಿ ಜಾಗ ತೋರಿಸಿದ್ದ ಎಂದು ತಿಳಿದು ಬಂದಿದೆ.
ಪ್ರತಿಭಟನಾಕಾರರ ಜತೆ ಮಾತನಾಡಿದ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಸಮಾಧಾನ ಪಡಿಸುವ ಕೆಲಸ ಮಾಡಿದರು. ಈ ಪ್ರಕರಣದಲ್ಲಿ 3 ದಿನದ ಹಿಂದೆ ಎಫ್ಐಆರ್ ದಾಖಲಿಸಲಾಗಿದ್ದು, ಒಬ್ಬಬ್ಬರ ದೂರಗಳನ್ನು ಪಡೆದಿದ್ದೇವೆ. ಈಗಾಗಲೇ ಸುಮಾರು 380 ಜನರು ದೂರು ನೀಡಿದ್ದು, ಇನ್ನು ಸುಮಾರು 300 ಜನರ ದೂರನ್ನು ಸಂಜೆಯವರೆಗೆ ಪಡೆಯಲಿದ್ದೇವೆ ಎಂದರು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದೇವೆ. ತಂಡಗಳನ್ನು ರಚಿಸಿ ದಿನೇಶ್ ಗೌಡ ಅವರನ್ನು ಹುಡುಕಲು ಪ್ರಾರಂಭಿಸಿದ್ದೇವೆ. ಮುಂದಿನ ಕ್ರಮವಾಗಿ ಕೋರ್ಟ್ ಅನುಮತಿ ನೀಡಿದ ನಂತರ ಕಚೇರಿ ಪರಿಶೀಲಿಸಿ ಆಸ್ತಿ ಪಾಸ್ತಿ ವಶಪಡಿಸಿಕೊಳ್ಳುವ ಕ್ರಮಕೈಗೊಳ್ಳುತ್ತೇವೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.