ಕರ್ನಾಟಕ

karnataka

ETV Bharat / city

ಮೇಕೆದಾಟಿಗಾಗಿ ತಮಿಳುನಾಡಿಗೆ ಎಂದು ಪಾದಯಾತ್ರೆ?: ಡಿಕೆಶಿಗೆ ಪ್ರಶ್ನಿಸಿದ ಬಿಜೆಪಿ

ಮೇಕೆದಾಟು ಹೋರಾಟದ ನಾಟಕದ ಮೂಲಕ ಹಳೆ ಮೈಸೂರು ಭಾಗದಲ್ಲಿ ತಮ್ಮ ನಾಯಕತ್ವ ಪ್ರತಿಷ್ಠಾಪನೆ ಮಾಡುವುದಷ್ಟೇ ಡಿಕೆ ಶಿವಕುಮಾರ್ ಅವರ ಉದ್ದೇಶವಾಗಿತ್ತು. ಆದರೆ, ಪಾದಯಾತ್ರೆಯ ಉದ್ದೇಶಕ್ಕೆ ಅವರ ಮೈತ್ರಿ ಪಕ್ಷದಿಂದಲೇ ಅಡ್ಡಿಯುಂಟಾಗಿದೆ. ಡಿಕೆಶಿ ಅವರೇ, ಜಲ ಜಪ ಮಾಡಿಕೊಂಡು ನಾಲ್ಕು ಹೆಜ್ಜೆ ನಡೆದವರೆಲ್ಲ ಭಗೀರಥರಾಗಲು ಸಾಧ್ಯವಿಲ್ಲ ಎಂದಿದೆ..

Tamilnadu government decision against on makebate project
ಮೇಕೆದಾಟಿಗಾಗಿ ತಮಿಳುನಾಡಿಗೆ ಎಂದು ಪಾದಯಾತ್ರೆ: ಡಿಕೆಶಿ ಪ್ರಶ್ನಿಸಿದ ಬಿಜೆಪಿ

By

Published : Mar 22, 2022, 5:37 PM IST

ಬೆಂಗಳೂರು :ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ‌‌ ಎಂದು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ‌ ನಿರ್ಣಯ ತೆಗೆದುಕೊಂಡಿದೆ. ತಮ್ಮದೇ ಮೈತ್ರಿ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಏಕೆ ಮೌನವಾಗಿದ್ದಾರೆ? ತಮಿಳುನಾಡಿಗೆ ಪಾದಯಾತ್ರೆ ಮಾಡುವುದೆಂದು? ಎಂದು ಬಿಜೆಪಿ ಪ್ರಶ್ನಿಸಿದೆ.

ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರ ಜೊತೆ ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು. ಆದರೆ, ಅಧಿಕಾರದ ದಾಹದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಕರ್ನಾಟಕದ ಪರವಾಗಿ ಮಾತನಾಡಲು ಹಿಂಜರಿದರು. ಡಿಕೆಶಿಯವರೇ, ಇಲ್ಲಿ ಪಾದಯಾತ್ರೆ ಮಾಡುವ ಬದಲು ತಮಿಳುನಾಡಿನ ಕಡೆಗೆ ಪಾದಯಾತ್ರೆ ಬೆಳೆಸಿದ್ದರೆ ಏನಾದರೂ ಲಾಭವಾಗುತ್ತಿತ್ತಲ್ಲವೇ? ಎಂದು ಪ್ರಶ್ನಿಸಿದೆ.

ರಾಜಕೀಯ ಲಾಭಕ್ಕಾಗಿ ಡಿಕೆ ಶಿವಕುಮಾರ್ ಒಂದಲ್ಲ ಎರಡು ಬಾರಿ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎರಡು ಬಾರಿ ಸುಳ್ಳಿನ ಜಾತ್ರೆ ಮಾಡಿ ಅಭ್ಯಾಸವಿರುವ ಡಿಕೆಶಿ ಅವರಿಗೆ ಮತ್ತೊಂದು ಬಾರಿ ಪಾದಯಾತ್ರೆ ಮಾಡುವುದು ಕಷ್ಟವೇನಿಲ್ಲ. ಮೂರನೇ ಬಾರಿ, ರಾಜ್ಯದ ಹಿತದೃಷ್ಟಿಯಿಂದ ತಮಿಳುನಾಡು ಕಡೆಗೆ ಪಾದಯಾತ್ರೆ ಮಾಡಿ. ನಿರೀಕ್ಷಿಸಬಹುದೇ?.

ಮೇಕೆದಾಟು ಪಾದಯಾತ್ರೆಯ ಮೂಲಕ ಬೆಂಗಳೂರಿನ 15ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿರುವುದಾಗಿ ಡಿಕೆಶಿ ಹೇಳಿದ್ದಾರೆ. ಅದು ನೀರಿಗಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಎಂಬುದು ಡಿಕೆ ಶಿವಕುಮಾರ್ ಅವರ ಹೇಳಿಕೆಯಲ್ಲೇ ಸ್ಪಷ್ಟವಾಗುತ್ತದೆ. ಹೋಳಿ ಹಬ್ಬ ಮುಗಿದಿದೆ, ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗುತ್ತಿದೆ ಎಂದು ಟೀಕಿಸಿದೆ.

ಕುಡಿಯುವ ನೀರಿಗಾಗಿ ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿರುವ ಯೋಜನೆಗೆ‌ ತಮಿಳುನಾಡಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಡಿಕೆಶಿ ಅವರಿಗೆ ತಮಿಳುನಾಡು ಸರ್ಕಾರದ ವಿರುದ್ಧ ಧ್ವನಿ ಎತ್ತುವ ತಾಕತ್ತು ಇದೆಯೇ? ನೀರಿನ ರಾಜಕಾರಣ ಮಾಡಿ ಸಿಎಂ ಆಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ.

ಮಹಾದಾಯಿ ಆಗಲಿ ಮೇಕೆದಾಟು ಆಗಲಿ ಕಾಂಗ್ರೆಸ್ ನಾಯಕರದು ಸದಾ ಇಬ್ಬಗೆಯ ನಿಲುವು. ಅಧಿಕಾರದಲ್ಲಿದ್ದಾಗ ಒಂದು ರೀತಿ, ಅಧಿಕಾರ ಕಳೆದುಕೊಂಡಾಗ ಇನ್ನೊಂದು ನೀತಿ. ತಮಿಳುನಾಡು ಸರ್ಕಾರ ತೆಗೆದುಕೊಂಡ ನಿರ್ಣಯದ ವಿರುದ್ಧ ಒಂದು ಸಾತ್ವಿಕ ಪ್ರತಿರೋಧ ತೋರುವ ಧೈರ್ಯವಾದರೂ ಡಿಕೆ ಶಿವಕುಮಾರ್ ಅವರಿಗೆ ಇದೆಯೇ? ಎಂದು ಪ್ರಶ್ನಿಸಿದರು.

ಮೇಕೆದಾಟು ಹೋರಾಟದ ನಾಟಕದ ಮೂಲಕ ಹಳೆ ಮೈಸೂರು ಭಾಗದಲ್ಲಿ ತಮ್ಮ ನಾಯಕತ್ವ ಪ್ರತಿಷ್ಠಾಪನೆ ಮಾಡುವುದಷ್ಟೇ ಡಿಕೆ ಶಿವಕುಮಾರ್ ಅವರ ಉದ್ದೇಶವಾಗಿತ್ತು. ಆದರೆ, ಪಾದಯಾತ್ರೆಯ ಉದ್ದೇಶಕ್ಕೆ ಅವರ ಮೈತ್ರಿ ಪಕ್ಷದಿಂದಲೇ ಅಡ್ಡಿಯುಂಟಾಗಿದೆ. ಡಿಕೆಶಿ ಅವರೇ, ಜಲ ಜಪ ಮಾಡಿಕೊಂಡು ನಾಲ್ಕು ಹೆಜ್ಜೆ ನಡೆದವರೆಲ್ಲ ಭಗೀರಥರಾಗಲು ಸಾಧ್ಯವಿಲ್ಲ ಎಂದಿದೆ.

ನೆಲ, ಜಲ-ಭಾಷೆ ಹಾಗೂ ಗಡಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಸದನದಲ್ಲಿ ಹೇಳಿರುವ ಸಿದ್ದರಾಮಯ್ಯ ಅವರೇ, ಮೇಕೆದಾಟು ಪಾದಯಾತ್ರೆ ಮಾಡಿದ್ದೇಕೆ? ಡಿಕೆಶಿಯೊಂದಿಗೆ ಪೈಪೋಟಿಗಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದೇ? ಈಗ ಕೇಂದ್ರ ಸರ್ಕಾರವನ್ನು ದೂರುವ ಬದಲು ಸೋನಿಯಾ ಗಾಂಧಿ ಮೂಲಕ ತಮಿಳುನಾಡು ಸರ್ಕಾರದ ಮೇಲೆ ಒತ್ತಡ ಹೇರಬಹುದಲ್ಲವೇ? ಎಂದು ಟ್ವೀಟ್ ಮಾಡಿದೆ.

ಅಗತ್ಯ ಬಿದ್ದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರ ಸರ್ಕಾರವನ್ನು ಭೇಟಿಯಾಗುತ್ತೇವೆ ಎಂದು ಸ್ವತಃ ಸಿಎಂ ಭರವಸೆ ನೀಡಿದ್ದಾರೆ. ಇದರ ಒಂದು ಪಾಲಿನಷ್ಟಾದರೂ ಧೈರ್ಯ ತೋರಿ ಸೋನಿಯಾ, ರಾಹುಲ್‌ ಗಾಂಧಿ ಮೂಲಕ ತಮಿಳುನಾಡು ಸರ್ಕಾರದ ಕಿವಿ ಹಿಂಡಲು ನಿಮಗೆ ಅಡ್ಡಿಯಾಗಿರುವುದೇನು?.

"ಕರ್ನಾಟಕದಲ್ಲಂತೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ, ನಮಗೆ ಮೈತ್ರಿಯ ಮೂಲಕ ಅಧಿಕಾರ ಲಭಿಸಿರುವುದು ತಮಿಳುನಾಡಿನಲ್ಲಿ. ಹೀಗಾಗಿ, ನಮಗೆ ಕರ್ನಾಟಕಕ್ಕಿಂತ ತಮಿಳುನಾಡೇ ಮುಖ್ಯ"ರಾಹುಲ್‌ ಗಾಂಧಿ ಹೀಗೆಂದಿರಬಹುದೆಂಬ ಸಂಶಯ ದಟ್ಟವಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಪರವಿರುವುದು ಸ್ಪಷ್ಟವಾಗುತ್ತಿದೆ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ:ಸರ್ಕಾರಿ ವಕೀಲರ ನೇಮಕಾತಿಗೆ ಮಾರ್ಗಸೂಚಿ : ಮಾಧುಸ್ವಾಮಿ ಭರವಸೆ

ABOUT THE AUTHOR

...view details