ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ಆಪ್ತರಿಂದಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಗ್ಗೆ ಮಾತಾಡಿದ್ದಾರೆ ಎನ್ನಲಾದ ವಿಡಿಯೋ ರಿಲೀಸ್ ಬೆನ್ನೆಲ್ಲೇ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಡಿಕೆಶಿ ಭ್ರಷ್ಟಾಧ್ಯಕ್ಷ ಎನ್ನುವ ಹ್ಯಾಷ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದೆ.
ಕೆಪಿಸಿಸಿ ಕಚೇರಿಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಪದಾಧಿಕಾರಿಗಳು ತೆರೆದಿಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪಕ್ಷ ತವರು ಮನೆಯಾಗಿದೆ ಎಂದು ಭ್ರಷ್ಟಾಧ್ಯಕ್ಷ ಹ್ಯಾಷ್ ಟ್ಯಾಗ್ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.
ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ ?
ಡಿ ಕೆ ಶಿವಕುಮಾರ್ ಅವರೇ, ಸೀಸರ್‌ನ ಪತ್ನಿ ಅನುಮಾನಕ್ಕೆ ಅತೀತವಾಗಿರಬೇಕೆಂಬ ಮಾತಿದೆ. ಆದರೆ ಕೆಪಿಸಿಸಿ ಪಕ್ಷದ ವೇದಿಕೆಯಲ್ಲೇ ನಿಮ್ಮವರೇ ನಿಮ್ಮ ಬಗ್ಗೆ ಆಡಿರುವ ಅಧಿಕೃತ ಮಾತುಗಳ ಬಗ್ಗೆ ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ ಎಂದು ಪ್ರಶ್ನಿಸಿದೆ.
ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ತಿಳಿಸಿದ್ದಾರೆ:
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ನಡೆದ ಐಟಿ, ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹಾಗೂ ಸಲೀಂ ಅವರು ಸ್ಪಷ್ಟಪಡಿಸಿದ್ದಾರೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.