ಬೆಂಗಳೂರು: ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತರುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಆರೋಪಿ ದಿವ್ಯಾ ಹಾಗರಗಿ ಇರುವ ಫೋಟೋ ಪ್ರಕಟಿಸಿ ಬಿಜೆಪಿ ಟೀಕಿಸಿದೆ.
ಪ್ರಿಯಾಂಕ ಖರ್ಗೆಯವರೇ, ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಆಪಾದಿಸಿದ್ದೀರಿ. ಆದರೆ ಇಲ್ಲಿ ನೋಡಿ.. ಈ ಚಿತ್ರ ಏನು ಹೇಳುತ್ತದೆ?ಎಷ್ಟೊಂದು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ! ನಿಮ್ಮ ಪಕ್ಷದ ಯಾರು ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು ವಿವರಿಸಬಹುದೇ? ಎಂದು ಬಿಜೆಪಿ ಫೋಟೋ ಪ್ರಕಟಿಸಿ ಸರಣಿ ಟ್ವೀಟ್ ಮಾಡಿ ಖರ್ಗೆ ಕಾಲೆಳೆದಿದೆ. ಪ್ರಿಯಾಂಕ ಖರ್ಗೆ ಅವರ ಜೊತೆ ನಾವಿದ್ದೇವೆ ಎಂದು ಕೆಪಿಸಿಸಿ ಭ್ರಷ್ಟಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇಕೆ ಎಂದು ಈಗ ಬಯಲಾಗುತ್ತಿದೆ. ಹಗರಣದ ನಿರ್ಮಾಣ, ನಿರ್ದೇಶನ, ಚಿತ್ರಕತೆ, ಸಂಭಾಷಣೆ ಎಲ್ಲವೂ ಸಿದ್ಧವಾಗಿದ್ದು ಕೆಪಿಸಿಸಿ ಕಚೇರಿಯಲ್ಲೇ? ಎಂದು ಬಿಜೆಪಿ ಆರೋಪಿಸಿದೆ.
ಸರ್ಕಾರಿ ಅಧಿಕಾರಿ ಸಮನ್ಸ್ ಕಳುಹಿಸಿದರೆ, ಜವಾಬ್ದಾರಿಯುತ ನಾಗರಿಕನಾಗಿ, ಜನಪ್ರತಿನಿಧಿಯಾಗಿ ಅಲ್ಲಿಗೆ ಬಂದು ಪ್ರಿಯಾಂಕ ಖರ್ಗೆ ಉತ್ತರಿಸಬೇಕಿತ್ತು. ಪ್ರಕರಣದ ಬಗ್ಗೆ ತಿಳಿದಿರುವ ಮಾಹಿತಿಯನ್ನು ಹಂಚಿಕೊಳ್ಳಿ ಎಂದಷ್ಟೇ ಹೇಳಿದ್ದು,ನೀವೇಕೆ ʼನನ್ನನ್ನೇ ಆರೋಪಿಯಂತೆ ಬಿಂಬಿಸುತ್ತಿದ್ದಾರೆʼ ಎಂದು ಗೋಳಾಡುತ್ತಿದ್ದೀರಿ? ಮಾಧ್ಯಮದ ಮುಂದೆ ಹೇಳಿಕೆ ನೀಡಿ ಹಿಟ್ & ರನ್ ಮಾಡಬಹುದು ಎಂದು ಖರ್ಗೆ ಅಂದುಕೊಂಡಿದ್ದರು. ಆದರೆ ಪ್ರಕರಣ ತನ್ನ ಬುಡಕ್ಕೆ ಬರುತ್ತಿದ್ದಂತೆ ಪಲಾಯನ ಮಾಡುತ್ತಿದ್ದಾರೆ. ಸರ್ಕಾರ ಆಳವಾದ ತನಿಖೆ ಮಾಡದು ಎಂದುಕೊಂಡಿದ್ದವರು ಈಗ ಬೆದರಿದ್ದಾರೆ. ಏಕೆಂದರೆ ಖರ್ಗೆ ಕುಟುಂಬದ ಆತ್ಯಾಪ್ತರೇ ಇಲ್ಲಿ ಆರೋಪಿಗಳಾಗಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ.
ತಾಕತ್ತಿದ್ದರೆ ನಮಗೆ ನೋಟಿಸ್ ನೀಡಿ ಎಂದು ಸವಾಲೆಸೆದಿರುವ ಡಿಕೆ ಶಿವಕುಮಾರ್ ಅವರೇ, ನಿಮ್ಮ ವಿರುದ್ಧವಿರುವ ಪ್ರಕರಣಗಳು ಎಷ್ಟು ಗೊತ್ತೇ? ಎಷ್ಟು ಪ್ರಕರಣದಲ್ಲಿ ಬೇಲ್ ಪಡೆದಿದ್ದೀರಿ, ಯಾವ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದೀರಿ ಎಂದು ವಿವರಿಸುವಿರಾ? ನೀವು ತಿಹಾರ್ ಜೈಲು ವಾಸ ಮಾಡಿದ್ದು ಸ್ವಾತಂತ್ರ್ಯ ಹೋರಾಟಕ್ಕಾಗಿಯೇ? ಸಿಆರ್‌ಪಿಸಿ ಪ್ರಕಾರ ತನಿಖಾಧಿಕಾರಿಗಳಿಗೆ ಯಾವುದೇ ಪ್ರಕರಣದ ತನಿಖೆ ನಡೆಸುವಾಗ ದಾಖಲೆ ಹಾಗೂ ಸಾಕ್ಷಿಯ ಮೂಲ ಕೇಳುವ ಅಧಿಕಾರವಿದೆ. ಸಿಐಡಿ ಅಧಿಕಾರಿಗಳು ನಿಯಮದ ಪ್ರಕಾರ ನೋಟಿಸ್ ನೀಡಿದ್ದಾರೆ. ಅಧಿಕಾರಿಗಳ ಈ ನಡೆಯನ್ನು ತಪ್ಪು ಎಂದು ಹೇಳಲು ಕಾಂಗ್ರೆಸ್ಸಿಗರೇನು ಸಂವಿಧಾನ ಹಾಗೂ ಕಾನೂನಿಗೆ ಅತೀತರೇ? ಎಂದು ಬಿಜೆಪಿ ಕಿಡಿಕಾರಿದೆ.
ಅಧಿಕಾರದಲ್ಲಿದ್ದಾಗಲೇ ಲೋಕಾಯುಕ್ತ ಸಂಸ್ಥೆಯನ್ನು ಸಿದ್ದರಾಮಯ್ಯ ಅಂಗವಿಕಲಗೊಳಿಸಿದರು. ಬುರುಡೆರಾಮಯ್ಯ ಅವರೇ, ನಿಮ್ಮ ಸುತ್ತಲೂ ಇರುವ ಪರ್ಸೆಂಟೇಜ್ ಕುಳಗಳನ್ನು ರಕ್ಷಣೆ ಮಾಡಲು ಈ ಕೆಲಸ ಮಾಡಿದ್ದೇ? ಭ್ರಷ್ಟಾಚಾರಕ್ಕೆ ಹಿಂಬಾಗಿಲ ಮೂಲಕ ಪ್ರೋತ್ಸಾಹಿಸಿದ ಮೀರ್‌ಸಾದಿಕ್ ಇಂದು ಸೊಬಗನಂತೆ ವರ್ತಿಸುತ್ತಿದ್ದಾರೆ. ಅರ್ಕಾವತಿ ಕರ್ಮಕಾಂಡಕ್ಕೆ ಸಂಬಂಧಪಟ್ಟಂತೆ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಆ ಪ್ರಕರಣದ ತನಿಖೆ ಸರಿಯಾಗಿ ನಡೆದರೆ ನೀವು ಜೈಲು ಪಾಲಾಗುತ್ತಿದ್ದಿರಲ್ಲವೇ? ಆ ಭಯದಿಂದಲೇ, ಜೈಲು ವಾಸ ತಪ್ಪಿಸಿಕೊಳ್ಳಲು ಲೋಕಾಯುಕ್ತ ಸಂಸ್ಥೆಯನ್ನೇ ಉಸಿರುಗಟ್ಟಿಸಿದಿರಿ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಸಿಡಿ ವಿವಾದ, ಹಿಜಾಬ್ ಸಂಘರ್ಷ, 40% ಕಮಿಷನ್, ಹರ್ಷ ಕೊಲೆ, ಹುಬ್ಬಳ್ಳಿ ಗಲಭೆ, ಪಿಎಸ್ಐ ನೇಮಕ ಹಗರಣ... ಎಲ್ಲದಕ್ಕೂ ಸೂತ್ರಧಾರ ಒಬ್ಬರೇ. ಡಿಕೆ ಶಿವಕುಮಾರ್ ಅವರೇ, ನೀವೆಷ್ಟೇ ರಹಸ್ಯ ಕಾರ್ಯಚರಣೆ ನಡೆಸಿದರೂ ಸತ್ಯ ಒಂದಿಲ್ಲೊಂದು ದಿನ ಬಯಲಾಗಲೇಬೇಕಲ್ಲವೇ? ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಅವರು ನಡೆಸುತ್ತಿರುವ ಪ್ರತಿಯೊಂದು ಷಡ್ಯಂತ್ರ್ಯಕ್ಕೂ ಈಗ ದಾಖಲೆ ಲಭಿಸುತ್ತಿದೆ. ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರದ ಬಂಗಲೆಯೇ ಪ್ರಮುಖ ಅಡ್ಡ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.
ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ: ಮತ್ತೋರ್ವ ಅಭ್ಯರ್ಥಿ ಬಂಧಿಸಿದ ಸಿಐಡಿ