ಬೆಂಗಳೂರು:ವಿಧಾನ ಪರಿಷತ್ ಚುನಾವಣೆ, ಬಿಬಿಎಂಪಿ ಸೇರಿದಂತೆ ಮುಂಬರಲಿರುವ ಎಲ್ಲಾ ಚುನಾವಣೆಗಳನ್ನು ಪಕ್ಷ ಅತ್ಯಂತ ಗಂಭೀರವಾಗಿ ಪರಿಗಣಿಸಿ ಗೆಲ್ಲುವ ಎಲ್ಲ ಪ್ರಯತ್ನ ಮಾಡಬೇಕು ಎಂದು ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಡಿ.ಎ.ಅರುಣ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು. ಪ್ರಚಲಿತ ವಿದ್ಯಮಾನ ಹಾಗೂ ಮುಂಬರುವ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದೆ. ಪರಿಷತ್ ಚುನಾವಣೆ ನಂತರ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಬಿಬಿಎಂಪಿ ಚುನಾವಣೆ ಚುನಾವಣೆ ಕೂಡ ಬರಲಿದೆ. ಅದಕ್ಕೆ ಸಿದ್ದತೆ ನಡೆಸುವ ಕುರಿತು ಚರ್ಚಿಸಲಾಗಿದೆ ಎಂದರು.
ಉಪ ಚುನಾವಣೆಯಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದ ತಿಳಿಸಲಾಗಿದೆ. ಸಂಘಟನಾತ್ಮಕ ಚಟುವಟಿಕೆ ಮತ್ತು ವರದಿ ಸ್ವೀಕರಿಸಲಾಗಿದೆ. ರಾಜ್ಯಾದ್ಯಂತ ಪಕ್ಷದ ಚಟುವಟಿಕೆ ಬಗ್ಗೆ ಸಮಗ್ರ ಚರ್ಚೆ ಮಾಡಲಾಗಿದೆ. ಪರಿಷತ್ ಚುನಾವಣೆ ನಿಮಿತ್ತ ಜನಸ್ವರಾಜ್ ಯಾತ್ರೆ ಇದ್ದು, ನಾಲ್ಕು ತಂಡ ಬೇರೆ ಬೇರೆಕಡೆ ಪ್ರವಾಸ ಮಾಡಲಿದೆ ಆದರೆ ಚುನಾವಣಾ ದಿನಾಂಕ ಘೋಷಣೆ ಹಿನ್ನಲೆಯಲ್ಲಿ ಯಾತ್ರೆ ದಿನಾಂಕ ಮಾರ್ಪಡಿಸಿದ್ದು ನವೆಂಬರ್ 18 ರಿಂದ 21 ರವರೆಗೆ ನಡೆಯಲಿದೆ.ನಾಲ್ಕು ದಿನಗಳ ವಿಸ್ತೃತ ಪ್ರವಾಸ ಕೈಗೊಳ್ಳಲಾಗುತ್ತದೆ. ಇದರ ಯಶಸ್ವಿಗೆ ಮಂಡಲ ತಂಡ ತೊಡಗಿಸಿ ಕೊಳ್ಳಬೇಕು ಎನ್ನುವ ಸೂಚನೆ ನೀಡಲಾಯಿತು ಎಂದು ಹೇಳಿದರು.
ನಾಮಫಲಕ ಅನಾವರಣ, ಬೂತ್ ಮಟ್ಟದ ಕಾರ್ಯಕ್ರಮ, ಸೇವಾ ಹೀ ಸಂಘಟನ್ ಕಾರ್ಯಕ್ರಮ ಮುಂದುವರೆಸುವುದು. ಕಾಪ್ಸ್ 26 ಸಮ್ಮಿಟ್ ಸಭೆ ನಡೆದಿದ್ದು, ಪ್ರಧಾನಿ ಅವರಿಗೆ ಧನ್ಯವಾದ ಹೇಳಲಾಯಿತು. ಜಗತ್ತಿನಲ್ಲಿ ನೂರು ಕೋಟಿ ಲಸಿಕೆ ನೀಡಿದ್ದು, 94% ಉಚಿತ ವ್ಯಾಕ್ಸಿನ್ ನೀಡಲಾಗಿದೆ.ಇದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಲಾಯಿತು ಎಂದರು.
ರಾಷ್ಟ್ರ ಮಟ್ಟದ ಕಾರ್ಯಕ್ರಮ ಕಮಲ ಪುಷ್ಪ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಕಾರ್ಯಕರ್ತರನ್ನ ಗುರ್ತಿಸಿಕೊಂಡು ತಂಡ ರೂಪಿಸಲಾಗಿದೆ. ಕರ್ನಾಟಕಕ್ಕೆ 9 ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಹಾಜಬ್ಬ, ತುಳಸಿಗೌಡ ಅವರನ್ನ ಗುರ್ತಿಸಿದ್ದು, ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು ಎಂದು ತಿಳಿಸಿದರು.