ಕರ್ನಾಟಕ

karnataka

ETV Bharat / city

ಗ್ರಾಪಂ ಗೆಲುವಿನ ಅಲೆಯಲ್ಲಿ ಜಿಪಂ, ತಾಪಂ ಚುನಾವಣೆಗೂ ಸಜ್ಜಾದ ಬಿಜೆಪಿ - BJP geared for ZP and Taluk panchayat elections

ಗ್ರಾಪಂ ಚುನಾವಣೆ ಗೆಲುವಿನ ಜಿಪಂ ಮತ್ತು ತಾಪಂ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ನಂತರ ಪಕ್ಷದ ತಳಮಟ್ಟದ ಮುಖಂಡರನ್ನು ಹುರಿದುಂಬಿಸುವ ಕಾರ್ಯ ಆರಂಭಿಸಿದೆ. ಈ ಮೂಲಕ ಮತ್ತೊಮ್ಮೆ ಬಿಜೆಪಿ ಇತರೆ 2 ಪ್ರಬಲ ಪಕ್ಷಗಳಿಗಿಂತ ಪ್ರಚಾರದ ವಿಚಾರದಲ್ಲಿ ಈಗಾಗಲೇ ಮುಂದಿದೆ ಎನ್ನುವುದು ಸಾಬೀತಾಗಿದೆ.

BJP Congress JDS
ಬಿಜೆಪಿ ಕಾಂಗ್ರೆಸ್​ ಜೆಡಿಎಸ್​

By

Published : Jan 4, 2021, 10:41 PM IST

ಬೆಂಗಳೂರು:ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಾಜ್ಯ ಬಿಜೆಪಿ ನಾಯಕರು ಇದೀಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಗೆಲುವಿಗೆ ಕಾರ್ಯತಂತ್ರ ಹೆಣೆಯಲು ಆಗಲೇ ಕಾರ್ಯಪ್ರವೃತ್ತರಾಗಿದ್ದಾರೆ.

ರಾಜ್ಯದಲ್ಲಿ ಡಿ. 30ರಂದು ಪ್ರಕಟವಾದ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿಯಲ್ಲಿ ಹೊಸ ಚೈತನ್ಯ ಮೂಡಿದೆ. ಜಿಪಂ ಹಾಗೂ ತಾಪಂಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗೆ ಈಗಾಗಲೇ ಬಿಜೆಪಿ ಸಿದ್ಧತೆ ನಡೆಸಿದೆ.

ಜನಸೇವಕ ಯಾತ್ರೆ ಮೂಲಕ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ರಾಜ್ಯ ಬಿಜೆಪಿ ಮುನ್ನುಡಿ ಇಟ್ಟಿದ್ದು, ವಿಶೇಷ ಎಂದರೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ನಿಟ್ಟಿನಲ್ಲಿ ಯೋಚಿಸುವ ಮುನ್ನವೇ ಬಿಜೆಪಿ ಬೀದಿಗಿಳಿದು ಪ್ರಚಾರ ಕಾರ್ಯತಂತ್ರ ಆರಂಭಿಸಿದೆ.

ಜನಸೇವಕ ಯಾತ್ರೆ ಮೂಲಕ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ, ಚುನಾವಣೆಗೆ ಸಿದ್ಧಗೊಳಿಸುವ ಹಾಗೂ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವ ಮಹತ್ವದ ಕಾರ್ಯ ಇದೇ ಬರುವ 11ರಂದು ನಡೆಯಲಿದೆ.

ಜನಸೇವಕ ಸಮಾವೇಶ ಮೂಲಕ ಯಾತ್ರೆಗೆ ಚಾಲನೆ ನೀಡಲು ರಾಜ್ಯ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಎರಡು ಸಮಾವೇಶ ನಡೆಸಲು ಬಿಜೆಪಿ ನಿರ್ಧರಿಸಿದೆ.

ಗ್ರಾಮ ಪಂಚಾಯಿತಿ ಗೆಲುವು:5,728 ಗ್ರಾಮ ಪಂಚಾಯಿತಿಯ ಒಟ್ಟು 82,616 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 20,428, ಕಾಂಗ್ರೆಸ್ ಬೆಂಬಲಿತರು 19,253, ಜೆಡಿಎಸ್ ಬೆಂಬಲಿತರು 12,731 ಹಾಗೂ ಪಕ್ಷೇತರರು 8,062 ಮಂದಿ ಗೆಲವು ಸಾಧಿಸಿದ್ದಾರೆ. 8 ಸಾವಿರಕ್ಕೂ ಅಧಿಕ ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ ಎಂಬ ಅಂಕಿ-ಅಂಶ ಲಭಿಸಿದೆ. ಆದರೆ ಇದು ಅಂತಿಮವಲ್ಲ. ಬಿಜೆಪಿಯೇ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂಬ ಮಾಹಿತಿ ಇದೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ರೀತಿ ಪಕ್ಷದ ಅಧಿಕೃತ ಚಿನ್ಹೆಯಡಿ ಅಭ್ಯರ್ಥಿಗಳು ಸ್ಪರ್ಧಿಸುವಂತಿಲ್ಲ. ಆದರೆ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ವೈಯಕ್ತಿಕ ವರ್ಚಸ್ಸಿನ ಜೊತೆ ಪಕ್ಷದ ಬೆಂಬಲದ ಆಧಾರದ ಮೇಲೆ ಗೆಲುವು ಸಾಧಿಸುತ್ತಾರೆ. ಆಡಳಿತ ಪಕ್ಷವಾಗಿರುವ ಬಿಜೆಪಿಯ ಅಭ್ಯರ್ಥಿಗಳು ಹೆಚ್ಚು ಕಡೆ ಗೆದ್ದಿದ್ದಾರೆ ಎಂಬ ಮಾಹಿತಿ ಇದೆ.

ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ನೇರವಾಗಿ ಪಕ್ಷವೇ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಸಹಕಾರ ನೀಡುತ್ತದೆ. ಹಿನ್ನೆಲೆ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖವಾಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಸಂಕೇತವಾಗಿ ಪರಿಣಮಿಸಿದೆ.

ABOUT THE AUTHOR

...view details