ಕರ್ನಾಟಕ

karnataka

ETV Bharat / city

ಬಿಟ್ ಕಾಯಿನ್ ಪ್ರಕರಣದಲ್ಲಿ ಬಿ ಕೇರ್ ಫುಲ್ ಅಂದ ಬಿಎಸ್​ವೈ ; ಶಿಷ್ಯನ ನೆರವಿಗೆ ನಿಂತ ರಾಜಾಹುಲಿ!

ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ (Karnataka Bitcoin scam) ಭಾರಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿಗಳ ಪಾತ್ರದ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಸರಣಿ ಆರೋಪ ಮಾಡುತ್ತಿವೆ. ಪ್ರಕರಣದ ಗಂಭೀರತೆ ಹೆಚ್ಚಾಗುತ್ತಿದ್ದಂತೆ ಸಿಎಂ ಬೊಮ್ಮಾಯಿ ಅಲರ್ಟ್ ಆಗಿದ್ದಾರೆ. ಪ್ರಕರಣ ಗಂಭೀರ ಸ್ವರೂಪಕ್ಕೆ ತಿರುಗುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಶಿಷ್ಯನ ನೆರವಿಗೆ ಧಾವಿಸಿದ್ದಾರೆ..

cm bommai
cm bommai

By

Published : Nov 14, 2021, 3:55 PM IST

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ (Karnataka Bitcoin Scam) ಬೆನ್ನಲ್ಲೇ ರಾಜ್ಯ ನಾಯಕತ್ವದಲ್ಲಿ ಬದಲಾವಣೆಯ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆ ಅಲರ್ಟ್ ಆದ ಸಿಎಂ ಬೊಮ್ಮಾಯಿ (Cm Basavaraj Bommai) ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊರೆ ಹೋಗಿದ್ದಾರೆ. ಸಿಎಂ ಬೆನ್ನಿಗೆ ನಿಲ್ಲಲು ಬಿಎಸ್​​ವೈ ಸಮ್ಮತಿ ನೀಡಿದ್ದು, ಅಗತ್ಯ ಬಿದ್ದರೆ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸುತ್ತೇನೆ ಎನ್ನುವ ಅಭಯ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ (Bitcoin Case) ಭಾರಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿಗಳ ಪಾತ್ರದ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಸರಣಿ ಆರೋಪ ಮಾಡುತ್ತಿದೆ. ಪ್ರಕರಣದ ಗಂಭೀರತೆ ಹೆಚ್ಚಾಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಲರ್ಟ್ ಆಗಿದ್ದಾರೆ. ಪ್ರಕರಣದ ಬಗ್ಗೆ ವಿಸ್ತೃತ ಮಾಹಿತಿಯನ್ನು ಹೈಕಮಾಂಡ್​​ಗೆ ಸಲ್ಲಿಸಿದ್ದಾರೆ. ಖುದ್ದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ವಿವರಣೆ ನೀಡಿದ್ದಾರೆ.

ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿದ ಸಿಎಂ ಬಸವರಾಜ ಬೊಮ್ಮಾಯಿ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ನೀಡಿ ಚರ್ಚಿಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ ಎನ್ನುವ ಮಾಹಿತಿ ನೀಡಿ ಸವಿಸ್ತಾರವಾಗಿ ಚರ್ಚೆ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಬೊಮ್ಮಾಯಿ ಕಷ್ಟಕ್ಕೆ ಸ್ಪಂದಿಸಿರುವ ಬಿಎಸ್​ವೈ, ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ.

ಇಡೀ ಪ್ರಕರಣದಲ್ಲಿ ಅಲರ್ಟ್ ಆಗಿರಬೇಕು, ಯಾವ ಹಂತದಲ್ಲಿಯೂ ಆತುರದ ಹೇಳಿಕೆ ನೀಡಬೇಡಿ, ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದೀರಿ. ಆ ಹುದ್ದೆಯ ಗಾಂಭೀರ್ಯತೆಗೆ ತಕ್ಕ ರೀತಿಯಲ್ಲಿಯೇ ಪ್ರತಿಕ್ರಿಯೆ ನೀಡಬೇಕು, ಸಂಪುಟ ಸಹೋದ್ಯೋಗಿಗಳು ಮತ್ತು ಪಕ್ಷದ ನೆರವು ಪಡೆದುಕೊಂಡು ಪ್ರತಿಪಕ್ಷಗಳ ಟೀಕೆಯನ್ನು ಎದುರಿಸಿ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.

ಪ್ರಕರಣದಲ್ಲಿ ನಿಮ್ಮ ನೆರವಿಗೆ ಇರುತ್ತೇನೆ, ಅಗತ್ಯ ಬಿದ್ದರೆ ಹೈಕಮಾಂಡ್ ಜೊತೆ ಮಾತುಕತೆ ನಡೆಸುತ್ತೇನೆ ಎನ್ನುವ ಭರವಸೆ ನೀಡಿ ಬೊಮ್ಮಾಯಿ ರಕ್ಷಣೆಗೆ ಮುಂದಾಗಿದ್ದಾರೆ. ಯಡಿಯೂರಪ್ಪ ಅಭಯ ನೀಡಿದ ನಂತರ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿರುವ ಸಿಎಂ, ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಡುವ ಆರೋಪಗಳಿಗೆ ತಕ್ಕ ರೀತಿಯಲ್ಲಿ ತಿರುಗೇಟು ನೀಡುವಂತೆ ಸೂಚನೆ ನೀಡಿದ್ದಾರೆ.

ಹಾಗಾಗಿ, ಸುಧಾಕರ್ ಶನಿವಾರ ರಾತ್ರಿ ಮಾಧ್ಯಮಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಕ್ಷದ ನೆರವನ್ನೂ ಕೋರಿದ ಸಿಎಂಗೆ ಸ್ಪಂದನೆ ಸಿಕ್ಕಿದ್ದು, ಪಕ್ಷದ ವಕ್ತಾರರು ನಿರಂತರವಾಗಿ ಮಾಧ್ಯಮಗೋಷ್ಠಿ, ಪತ್ರಿಕಾ ಹೇಳಿಕೆ, ಟ್ವೀಟ್ ಮೂಲಕ ಕಾಂಗ್ರೆಸ್​​ಗೆ ತಿರುಗೇಟು ನೀಡಲು ಆರಂಭಿಸಿದ್ದಾರೆ.

ಬಿಟ್ ಕಾಯಿನ್ ಪ್ರಕರಣದಲ್ಲಿ (Bitcoin scam) ಬೊಮ್ಮಾಯಿ ನೆರವಿಗೆ ಸಿಎಂ ಸ್ಥಾನ ಲಭಿಸಲು ಕಾರಣರಾದ ಮಾಜಿ ಸಿಎಂ ಯಡಿಯೂರಪ್ಪ ನಿಂತಿದ್ದು, ಸಿಎಂ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇದೀಗ ಪಕ್ಷವೂ ಸಾಥ್ ನೀಡಿ ಸಿಎಂಗೆ ಆನೆಬಲ ತಂದುಕೊಟ್ಟಿದ್ದು, ಪಕ್ಷದಲ್ಲಿ ಸಿಗುತ್ತಿರುವ ಬೆಂಬಲದಿಂದ ಮುಖ್ಯಮಂತ್ರಿಗಳು ಕೊಂಚ ನಿರಾಳರಾಗಿದ್ದಾರೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

(ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮೀಲಾದ್ರೂ ಬಿಡಲ್ಲ, ಬಲಿ ಹಾಕ್ತೀವಿ: ಸಿಎಂ ಬೊಮ್ಮಾಯಿ)

ABOUT THE AUTHOR

...view details