ಬೆಂಗಳೂರು: ಲಾಕ್ಡೌನ್ ಎಫೆಕ್ಟ್ನಿಂದ ಗ್ರಾಹಕರು ವಸ್ತುಗಳನ್ನು ಖರೀದಿಸಲು ಬಿಗ್ ಬಜಾರ್ ಕಡೆ ಬಾರದಿರುವುದರಿಂದ ಮಾಲೀಕರು ನಷ್ಟ ಅನುಭವಿಸುವಂತಾಗಿದೆ.
ರಾಜ್ಯದಲ್ಲಿ ಮಾ. 24ರಿಂದ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜನ, ಕೊರೊನಾ ಭಯಕೂಡ ಎದುರಿಸುತ್ತಿರುವ ಹಿನ್ನೆಲೆ ಮನೆಯಾಚೆ ಬರುವುದನ್ನೇ ಕಡಿಮೆಮಾಡಿದ್ದಾರೆ. ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದ ಬಿಗ್ ಬಜಾರ್ ಮಳಿಗೆಯಲ್ಲಿ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿತ್ತು. ಆದರೆ, ಇದೀಗ ಇಲ್ಲಿನ ವ್ಯಾಪಾರ ಕೂಡ ಸಂಪೂರ್ಣ ಕಡಿಮೆಯಾಗಿದೆ.
ಬಿಗ್ ಬಜಾರ್ ಮಾತ್ರವಲ್ಲದೆ ಮೋರ್, ಡಿಮಾರ್ಟ್, ರಿಲಯನ್ಸ್ ಮಾರ್ಟ್ ಮತ್ತಿತರೆ ಮಳಿಗೆಗಳು ಕೂಡ ವ್ಯಾಪಾರ ನಷ್ಟ ಎದುರಿಸುತ್ತಿದ್ದು ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗಿವೆ. ಅಗತ್ಯ ವಸ್ತುಗಳ ಖರೀದಿಗೆ ಹಿಂದೆಲ್ಲ ದೊಡ್ಡ ಸಂಖ್ಯೆಯಲ್ಲಿ ಮಾಲ್ಗಳು ಅಥವಾ ಬಿಗ್ ಬಜಾರ್ ಮಾದರಿಯ ಮಳಿಗೆಗೆ ಭೇಟಿ ಕೊಡುತ್ತಿದ್ದ ಜನ ಇದೀಗ ಕಿರಾಣಿ ಅಂಗಡಿಗಳಲ್ಲಿ ಪೂರೈಸಿಕೊಳ್ಳುತ್ತಿದ್ದಾರೆ.
ನಿತ್ಯ ಮೂರ್ನಾಲ್ಕು ಸಾವಿರ ದ್ವಿಚಕ್ರ ವಾಹನ ಹಾಗೂ ಸಾವಿರಕ್ಕೂ ಹೆಚ್ಚು ಕಾರುಗಳಲ್ಲಿ ಗ್ರಾಹಕರು ಬೆಂಗಳೂರಿನ ಕತ್ರಿಗುಪ್ಪೆ ಬಿಗ್ ಬಜಾರ್ಗೆ ಭೇಟಿ ಕೊಡುತ್ತಿದ್ದರು. ಆದರೆ, ಇದೀಗ ಶೇ. 30 ರಷ್ಟು ಗ್ರಾಹಕರು ಕೂಡ ಇತ್ತ ಬರುತ್ತಿಲ್ಲ. ದಿನದಿಂದ ದಿನಕ್ಕೆ ವ್ಯಾಪಾರ ಕಡಿಮೆ ಆಗುತ್ತಿದ್ದು ಮಳಿಗೆಯಲ್ಲಿ ಸಂಗ್ರಹ ಕೂಡ ಕಡಿಮೆ ಆಗುತ್ತಿದೆ. ಅಗತ್ಯ ಭದ್ರತಾ ಸೌಲಭ್ಯ ಹೊಂದಿದ್ದರು ರೋಗ ಹರಡದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡಿದರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ ಎನ್ನುತ್ತಾರೆ ಭದ್ರತಾ ಸಿಬ್ಬಂದಿ.