ಬೆಂಗಳೂರು:ಕೊರೊನಾ ವೈರಸ್ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಸೋಂಕು. ಇದು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ಅಪಾರ ಬದಲಾವಣೆಗೆ ಕಾರಣವಾಗಿದೆ. ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಬೆಂಗಳೂರಿನ ಪೀಣ್ಯ ಕೂಡಾ ಕೊರೊನಾದೊಂದಿಗೆ ಸೆಣಸುತ್ತಿದೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಪೀಣ್ಯದಲ್ಲಿ ಶೇಕಡಾ 6ರಷ್ಟು ಕೊರೊನಾ ಪ್ರಕರಣಗಳು ಕಂಡುಬಂದಿದೆ. ಈ ನಡುವೆ ಕೈಗಾರಿಕಾ ಉತ್ಪಾದನೆಯೂ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದೆ.
ಕೈಗಾರಿಕಾ ಪ್ರದೇಶಗಳು ಕೊರೊನಾ ಎದುರಿಸುವ ಬಗೆ ಹೇಗೆ? ಕೈಗಾರಿಕೆಗಳ ಪ್ರಾರಂಭಕ್ಕೆ ಸರ್ಕಾರ ತಡವಾಗಿ ಸಮ್ಮತಿ ಸೂಚಿಸಿದ್ದು ರಾಜ್ಯದಲ್ಲಿ ಪೀಣ್ಯ, ದೊಡ್ಡಬಳ್ಳಾಪುರ, ರಾಜಾಜಿನಗರ ಸೇರಿದಂತೆ 2ನೇ ದರ್ಜೆ ನಗರಗಳಾದ ಬಳ್ಳಾರಿ, ಹುಬ್ಬಳ್ಳಿ ಹಾಗೂ ಇನ್ನಿತರೆ ನಗರಗಳಲ್ಲೂ ಕಾರ್ಖಾನೆಗಳು ಸಹಜ ಸ್ಥಿತಿಗೆ ಮರಳುತ್ತಿವೆ.
ಸಾಮಾನ್ಯವಾಗಿ ಕ್ಯಾಂಟೀನ್ ಅಥವಾ ಹೋಟೆಲ್ಗಳಲ್ಲಿ ಊಟಕ್ಕೆ ತೆರಳುತ್ತಿದ್ದ ನೌಕರರು ಈಗ ಮನೆಯಿಂದಲೇ ಊಟದ ಬುತ್ತಿಯನ್ನು ತರುತ್ತಿದ್ದು, ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಶೇಕಡಾ 30ರಷ್ಟು ಕಾರ್ಖಾನೆಗಳಲ್ಲಿ ಇನ್ನೂ ಕೆಲಸ ಆರಂಭವಾಗಿಲ್ಲ.
ಕೈಗಾರಿಕೆಗಳೂ ಕೂಡಾ ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿವೆ. ಆರೋಗ್ಯ ಸೇತು ಅಪ್ಲಿಕೇಷನ್ನಲ್ಲಿ ಬರುವ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡುತ್ತಿದೆ. ಅಕಸ್ಮಾತ್ ಕಾರ್ಮಿಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ವೇತನ ಸಹಿತ ರಜೆ ಕೂಡಾ ನೀಡುತ್ತಿರುವುದು ಶ್ಲಾಘನೀಯ.