ಬೆಂಗಳೂರು:ಭಾರತ ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಬೆಂಗಳೂರು ಘಟಕದಲ್ಲಿ ಇಂದಿನಿಂದ 19 ರವರೆಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದ್ದು, ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ ಉತ್ಪಾದನೆಯಲ್ಲಿ ಬಿಇಎಲ್ನ ಪಾತ್ರವನ್ನು ಪ್ರಶಂಸಿದರು. ರಕ್ಷಣಾ ಉತ್ಪಾದನೆಯ ಪ್ರಮುಖ 20 ಕಂಪನಿಗಳಲ್ಲಿ ಬಿಇಎಲ್ ಸ್ಥಾನವನ್ನು ಶ್ಲಾಘಿಸಿದರು. ಸಂಸ್ಥೆಯ ಉತ್ಪಾದನೆ ಹಾಗೂ ನಿರ್ಮಾಣಗಳಲ್ಲಿ ರಕ್ಷಣಾ ಮಂತ್ರಾಲಯದ ಸಹಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಬಿಇಎಲ್ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆನಂದಿ ರಾಮಲಿಂಗಂ ಸೇರಿದಂತೆ ಎಲ್ಲ ನಿರ್ದೇಶಕ ವರ್ಗದವರು, ಪ್ರಧಾನ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.