ಬೆಂಗಳೂರು :ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೋವಿಡ್ ಸೆಲ್ಫ್ ಮೆಡಿಸಿನ್ಗಳನ್ನು ತೆಗೆದುಕೊಂಡು ನಿಮ್ಮ ಜೀವಕ್ಕ ನೀವೆ ಕುತ್ತು ತಂದು ಕೊಳ್ಳಬೇಡಿ ಎಂದು ವೈದ್ಯ ಡಾ. ಜಗದೀಶ್ ಅವರು ಜನರಿಗೆ ತಿಳಿ ಹೇಳಿದ್ದಾರೆ.
ಈ ಕುರಿತು ಮಾತಾನಾಡಿರುವ ವೈದ್ಯರು, ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶವನ್ನ ನೋಡಿ ಜನರೇ ಸೆಲ್ಫ್ ಮೆಡಿಸನ್ ತೆಗೆದುಕೊಳ್ಳುವುದು, ವೈದ್ಯರ ಅನುಮತಿ ಇಲ್ಲದೇ ಇದ್ದರೂ ಮೆಡಿಕಲ್ ಸ್ಟೋರ್ನಲ್ಲಿ ಕೆಮ್ಮು, ನೆಗಡಿ, ಜ್ವರ ಅಂತ ಔಷಧಿ ಕೊಂಡುಕೊಳ್ಳುವುದನ್ನ ಮಾಡುತ್ತಿದ್ದಾರೆ.
ಕೆಲವರಂತೂ ವೈದ್ಯರ ಸಲಹೆ ಇಲ್ಲದೇ ಇದ್ದರೂ ಸ್ಟಿರಾಯ್ಡ್ ಬಳಸುತ್ತಿದ್ದಾರೆ. ಸ್ಟಿರಾಯ್ಡ್ ಬಳಸುವ ಮುನ್ನ ತಜ್ಞ ವೈದ್ಯರ ಮೇಲ್ವಿಚಾರಣೆ ಅತ್ಯಗತ್ಯ. ಇದ್ಯಾವುದೂ ಇಲ್ಲದೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ ತಕ್ಷಣ ನಿಲ್ಲಿಸಿ.
ಕೋವಿಡ್ ತೀವ್ರತೆ ತಿಳಿದೂ ಮನೆಯಲ್ಲೇ ಸ್ವಯಂಪ್ರೇರಿತ ತಜ್ಞರಾಗುವ ಮುನ್ನ ಎಚ್ಚರ.. ಸ್ಟಿರಾಯ್ಡ್ ಬ್ಲಾಕ್ ಫಂಗಸ್ಗೂ ದಾರಿ ಮಾಡಿಕೊಡಲಿದೆ. ಜನರು ಕೊಂಚ ಎಚ್ಚರವಾಗಿರಬೇಕು. ಕೊರೊನಾಕ್ಕಿಂತಲೂ ಬ್ಲಾಕ್ ಫಂಗಸ್ (ಮ್ಯುಕೋರ್ಮೈಕೋಸಿಸ್ ಫಂಗಸ್) ಇನ್ಫೆಕ್ಷನ್ ಹೆಚ್ಚು ಅಪಾಯಕಾರಿ.
ಹೀಗಾಗಿ, ಅನಗತ್ಯ ಸ್ಟಿರಾಯ್ಡ್ ಬಳಸಬೇಡಿ. ಅಲ್ಲದೆ, ಕೊರೊನಾ ಸೋಂಕಿತರಾಗಿದ್ದರೆ, ಸೋಂಕಿನಿಂದ ಗುಣಮಖರಾಗಿದ್ದರೆ, ಆದಷ್ಟು ಎನ್-95 ಮಾಸ್ಕ್ ಧರಿಸುವುದು ಉತ್ತಮ. ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗುವವರೆಗೆ ಸುರಕ್ಷತಾ ಕ್ರಮಕೈಗೊಳ್ಳುವುದು ಒಳಿತು.
ಇನ್ನು, ಹಲವರು ಸೋಂಕು ಇರುವುದನ್ನ ತಾವೇ ದೃಢೀಕರಿಸಿಕೊಂಡು ಲಿಮ್ಸಿ, ಜಿಂಕೋ ವಿಡ್ ಮೆಡಿಸನ್ ತೆಗೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ರೋಗ ಲಕ್ಷಣ, ಸೋಂಕಿನ ಅನುಮಾನ ಇದ್ದರೆ ಅಂತಹವರು ಸ್ಥಳೀಯ ಆಸ್ಪತ್ರೆಗ ಭೇಟಿ ನೀಡಿ, ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯುವುದು ಉತ್ತಮ.
ಕೊರೊನಾ ನಿರ್ಲಕ್ಷ್ಯ ಮಾಡಿ ಸ್ವಯಂಪ್ರೇರಿತ ತಜ್ಞರಾಗುವ ಮುನ್ನ ಯೋಚಿಸಿ ಮುಂದುವರೆಯಿರಿ ಎಂದು ವೈದ್ಯರಾದ ಜಗದೀಶ್ ಅವರು ಎಚ್ಚರಿಕೆ ನೀಡಿದ್ದಾರೆ.