ಬೆಂಗಳೂರು:ಎಲ್ಲರನ್ನೂ ಸಮಾನವಾಗಿ ಕಾಣುತ್ತಾ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ, ಹಸಿದವರಿಗೆ ಊಟ ನೀಡುತ್ತಾ ಎಲ್ಲರೂ ಬಸವ ಜಯಂತಿಯನ್ನು ಆಚರಿಸೋಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಕುಮಾರಸ್ವಾಮಿ, ದೇವೇಗೌಡರಿಂದ ನಾಡಿನ ಜನತೆಗೆ ಬಸವ ಜಯಂತಿ ಶುಭಾಶಯ - ಮಾಜಿ ಪ್ರಧಾನಿ ದೇವೇಗೌಡ
ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿಯ ನಿಮಿತ್ತ ಶುಭಾಶಯ ಕೋರಿರುವ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಾಯಕಯೋಗಿ ಎಲ್ಲರ ಬಾಳಲ್ಲಿ ನೆಮ್ಮದಿ, ಸುಖ ತರಲಿ ಎಂದು ಪ್ರಾರ್ಥಿಸಿದ್ದಾರೆ.
ಟ್ವೀಟ್ ಮೂಲಕ ಶುಭಾಶಯ ಕೋರಿರುವ ಅವರು, ನಮ್ಮ ನಾಡು ಕಂಡ ಅಪ್ರತಿಮ ಕಾಯಕಯೋಗಿ ಬಸವಣ್ಣನವರ ಜಯಂತ್ಯುತ್ಸವ ನಾಡಿಗೆ ಸುಖವನ್ನು ತರಲಿ, ದೇಶದಲ್ಲಿ ನೆಮ್ಮದಿ ಮನೆ ಮಾಡಲಿ. ಎಲ್ಲರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
ಇತ್ತ, ಜೆಡಿಎಸ್ ವರಿಷ್ಠ ದೇವೇಗೌಡರು ಸಹ ಶುಭಾಶಯ ಕೋರಿದ್ದು, ಶೋಷಣೆ ರಹಿತ ಸಮಾನತೆಯ ಸಮಾಜಕ್ಕಾಗಿ ಹೋರಾಡಿದ ಬಸವೇಶ್ವರರ ಆದರ್ಶಗಳು ಉತ್ತಮಮಾರ್ಗದಲ್ಲಿ ನಡೆಯಲು ಇರುವ ಬೆಳಕಿನಂತೆ. ಬಸವಣ್ಣನವರ ವಚನಗಳು ಇಡೀ ಜಗತ್ತಿಗೇ ಪ್ರಸ್ತುತವಾಗಿವೆ. ಮಾನವ ಕುಲಕ್ಕೆ ಜಾತ್ಯತೀತ ಸಂವಿಧಾನವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ಸ್ಮರಿಸಿದ್ದಾರೆ.