ಬೆಂಗಳೂರು:ತುಮಕೂರು ಕ್ಷೇತ್ರದಿಂದ ನಾಮಪತ್ರ ವಾಪಸ್ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಮುದ್ದಹನುಮೇಗೌಡರ ಮನವೊಲಿಕೆ ಯತ್ನ ನಡೆಸಿದರು.
ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿದ್ದ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವೊಲಿಸುವ ಪ್ರಯತ್ನ ಮಾಡಿದರು. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಹಿನ್ನೆಲೆ ಕಾಂಗ್ರೆಸ್ ನಾಯಕರು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಮುದ್ದಹನುಮೇಗೌಡರ ನಿವಾಸಕ್ಕೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಡಿಸಿಎಂ ಪರಮೇಶ್ವರ್, ಸೀಟು ಹಂಚಿಕೆ ಚರ್ಚೆ ಆದಾಗಿನಿಂದ ತುಮಕೂರು ಬಿಟ್ಟುಕೊಡಬೇಕು ಅಂದಾಗ ಆತಂಕ ಆಗಿತ್ತು. ಕಳೆದ ಚುನಾವಣೆಯಲ್ಲಿ ಮುದ್ದಹನುಮೇಗೌಡ್ರನ್ನ ಗೆಲ್ಲಿಸಿದ್ರು. ಐದು ವರ್ಷ ಸಂಸದ ಅನ್ನೋದನ್ನ ಬಿಟ್ಟು ಕಾರ್ಯಕರ್ತರಾಗಿ ಜನಮನ್ನಣೆ ಗಳಿಸಿದ್ರು. ಈ ಬಾರಿಯೂ ಗೆದ್ದು ಬರ್ತಾರೆ ಅಂತ ನಮ್ಮೆಲ್ಲರಿಗೂ ಗೊತ್ತಿತ್ತು. ಆದ್ರೆ ಈಗ ನಮಗೆ ಆಘಾತ ಆಗಿದೆ. ಅವರನ್ನು ಮನವೊಲಿಸುವ ಕೆಲಸ ಮಾಡಿದ್ದೇವೆ. ಬೆಂಬಲಿಗರ ಒತ್ತಡಕ್ಕೆ ಮಣಿದು ನಾಮಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ರಾಹುಲ್ ಹಾಗೂ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ಗೆ ಹೇಳಿದ್ವಿ. ಅವರು ಹೇಗಾದ್ರೂ ಮಾಡಿ ಮನವೊಲಿಸಿ ಅಂತ ತಿಳಿಸಿದ್ರು. ನಮ್ಮ ಮಾತಿಗೆ ಹಾಗೂ ರಾಹುಲ್ ಗಾಂಧಿ ಮಾತಿಗೆ ಗೌರವ ಕೊಟ್ಟು ಮುದ್ದಹನುಮೇಗೌಡರು ನಾಮಪತ್ರ ವಾಪಸ್ ತೆಗೆದುಕೊಳ್ಳುವ ವಿಶ್ವಾಸ ಇದೆ. ಅವರು ಕೂಡ ಏಕಾಏಕಿ ತೀರ್ಮಾನ ಮಾಡೋದಕ್ಕೆ ಆಗಲ್ಲವೆಂದು ತಿಳಿಸಿದರು.