ದೊಡ್ಡಬಳ್ಳಾಪುರ :ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶಿವರಾಜ್ ಹೋಟೆಲ್ನಲ್ಲಿ ದಲಿತರಿಗೆ ಊಟ ಮಾಡಿಸಿ, ಹೇರ್ ಕಟಿಂಗ್ ಶಾಪ್ನಲ್ಲಿ ಕ್ಷೌರ ಮಾಡಿಸುವ ಮೂಲಕ ಧೈರ್ಯ ತುಂಬಿದರು.
ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶಿವರಾಜ್ ಅವರು ಈ ಬಗ್ಗೆ ಮಾತನಾಡಿರುವುದು.. ತಾಲೂಕಿನ ಹೊಸಹಳ್ಳಿ ಗ್ರಾಮದ ಹೋಟೆಲ್ನಲ್ಲಿ ದಲಿತರ ಪ್ರವೇಶ ನಿರಕರಿಸಲಾಗಿದೆ ಮತ್ತು ಹೇರ್ ಕಟಿಂಗ್ ಶಾಪ್ಗಳಲ್ಲಿ ಕ್ಷೌರ ಮಾಡುತ್ತಿಲ್ಲವೆಂದು ಗ್ರಾಮದ ನರಸಿಂಹಯ್ಯ ಎಂಬುವರು ಆರೋಸಿದ್ದರು. ದೊಡ್ಡಬಳ್ಳಾಪುರ ಉಪ ವಿಭಾಗದ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ನರಸಿಂಹಯ್ಯ ಅಧಿಕಾರಿಗಳ ಮುಂದೆ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆಯ ಬಗ್ಗೆ ನೇರವಾಗಿ ಆರೋಪ ಮಾಡಿದರು.
ತಕ್ಷಣವೇ ಎಚ್ಚೆತ್ತ ತಾಲೂಕು ಆಡಳಿತ ತಹಶೀಲ್ದಾರ್ ಟಿ.ಶಿವರಾಜ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ನವಿನ್‌ಕುಮಾರ್ ಮತ್ತು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್ ಗ್ರಾಮಕ್ಕೆ ಭೇಟಿ ನೀಡಿದರು. ಅಸ್ಪೃಶ್ಯತೆ ಆಚರಣೆ ಬಗ್ಗೆ ಹೋಟೆಲ್ ಮತ್ತು ಹೇರ್ ಕಟಿಂಗ್ ಶಾಪ್ ಮಾಲೀಕರಿಗೆ ಎಚ್ಚರಿಕೆ ನೀಡಿ, ಅಧಿಕಾರಿಗಳ ತಂಡ ರಹಸ್ಯ ಕಾರ್ಯಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ಒಂದು ವೇಳೆ ಅಸ್ಪೃಶ್ಯತೆ ಆಚರಣೆ ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಲಿಂಗ, ಧರ್ಮ, ಜಾತಿ ಹೆಸರಿನಲ್ಲಿ ಬೇಧ- ಭಾವ ಮಾಡುವಂತಿಲ್ಲ. ಗ್ರಾಮಸ್ಥರು ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಶಿವರಾಜ್ ಬುದ್ಧಿವಾದ ಹೇಳಿದರು.