ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ ಜಿಲ್ಲೆ): ತಾಲೂಕಿನ ಮಲ್ಲೋಹಳ್ಳಿಯ ಶ್ರೀರಂಗನಾಥ ಪ್ರೌಢಶಾಲೆಯನ್ನು 35 ವರ್ಷಗಳ ಹಿಂದೆ ಕಲ್ಲಿನ ಕಟ್ಟಡದಲ್ಲಿ ಆರಂಭಿಸಲಾಗಿತ್ತು. ಗ್ರಾಮದ ರಾಜಗೋಪಾಲ್ ಎಂಬುವರು ತಮ್ಮ ಊರಿನ ನೆನಪಿಗಾಗಿ ಶಾಲೆಯನ್ನ ಕಟ್ಟಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಶಾಲೆಯಲ್ಲಿ ಸೌಲಭ್ಯಗಳಿಲ್ಲದೆ ಶಾಲೆ ಸೊರಗಿ ಹೋಗಿದೆ.
ಸುತ್ತಮುತ್ತಲಿನ ಐದಾರು ಗ್ರಾಮಗಳ ವಿದ್ಯಾರ್ಥಿಗಳಿಗೆ ಶ್ರೀರಂಗನಾಥ ಪ್ರೌಢಶಾಲೆ ಹತ್ತಿರ ಇದ್ದು ವಿದ್ಯಾಭ್ಯಾಸಕ್ಕೆ ಅನುಕೂಲವಾಗಿತ್ತು. ಗ್ರಾಮೀಣ ಭಾಗದಲ್ಲಿನ ಅನುದಾನಿತ ಖಾಸಗಿ ಶಾಲೆಯಾಗಿದ್ದರು ಸಾಕಷ್ಟು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು, ಈಗಲೂ 8, 9 ಹಾಗೂ 10ನೇ ತರಗತಿಯಲ್ಲಿ 20 ವಿದ್ಯಾರ್ಥಿನಿಯರು ಸೇರಿ 84 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಪ್ರಾರಂಭದಲ್ಲಿ ಶಾಲಾ ಆಡಳಿತ ಮಂಡಳಿಗೆ ಇದ್ದ ಉತ್ಸಾಹ ಬತ್ತಿ ಹೋಗಿದೆ. ಇವರು ಇತ್ತ ತಿರುಗಿ ನೋಡಿಲ್ಲ. ಶಾಲೆಯ ಅಭಿವೃದ್ಧಿ ಕುರಿತು ಒಂದು ದಿನ ಕೂಡ ಸಭೆ ನಡೆಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಶಾಲಾ ಅವರಣದಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ಇದ್ದರು ಬಳಸುವ ಸ್ಥಿತಿಯಲ್ಲಿ ಇಲ್ಲ, ಗಂಡು ಮಕ್ಕಳು ಶೌಚಾಲಯಕ್ಕಾಗಿ ಹೊಲಗದ್ದೆಗಳಿಗೆ ಹೋಗಬೇಕು. ಹೊಲದ ಮಾಲೀಕರಿಗೆ ಕಂಡರೇ ಬೈಸ್ಕೊಂಡ್ ಬರ್ಬೇಕು. ಶಾಲಾ ಅವರಣದಲ್ಲಿನ ಬೋರ್ವೆಲ್ ಕೆಟ್ಟು ಎಷ್ಟೋ ದಿನಗಳಾಗಿದ್ದು, ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಬಳಸುವ ನೀರನ್ನು ವಿದ್ಯಾರ್ಥಿಗಳು ಊರಿನಿಂದ ಹೊತ್ಕೊಂಡು ತರಬೇಕಾದ ಸ್ಥಿತಿ ಇದೆ. ಮಳೆ ಬಂದಾಗ ಕೊಠಡಿ ಸೋರುತ್ತೆ, ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಸ್ಥಿತಿಯಲ್ಲಿದ್ದು ವಿದ್ಯಾರ್ಥಿಗಳು ಭಯದಲ್ಲಿ ಪಾಠ ಕೇಳಬೇಕು ಪರಿಸ್ಥಿತಿ ನಿರ್ಮಾಣವಾಗಿದೆ.