ಬೆಂಗಳೂರು: ಕೃಷಿ ಕ್ಷೇತ್ರ ಸಕಾಲಕ್ಕೆ ಕಾರ್ಯನಿರ್ವಹಣೆಯನ್ನು ಬಯಸುತ್ತದೆ. ಸಾಧ್ಯವಾಗದಿದ್ದಾಗ ಸಾಕಷ್ಟು ಸಮಸ್ಯೆಗಳೂ ಎದುರಾಗಬಹುದು. ಔಷಧ ಸಿಂಪಡಣೆಯಂತೂ ಕೊಂಚ ಸಮಯ ತಡವಾದರೂ ಬೆಳೆ ನಾಶಕ್ಕೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂದು ಹಲವಾರು ಸಂಸ್ಥೆಗಳು ಬತ್ತದ ಗದ್ದೆಗಳಿಗೆ ಔಷಧ ಸಿಂಪಡಿಸಲು ಆಧುನಿಕ ತಂತ್ರಜ್ಞಾನ ಬಳಕೆಯ ಮೊರೆ ಹೋಗಿವೆ. ಅದರಲ್ಲಿ ಡ್ರೋಣ್ (Drone) ಕೂಡ ಒಂದು.
ಹೌದು, ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಯಶಸ್ಸು ಕಂಡಿರುವ ಡ್ರೋನ್ ಇದೀಗ ಕೃಷಿ ಕ್ಷೇತ್ರಕ್ಕೂ ಪರಿಚಯಿಸಲಾಗಿದೆ. ಬೃಹತ್ ಗಾತ್ರದ ಡ್ರೋಣ್ಗೆ (Fertilizer spray Drone) ಹತ್ತಾರು ಲೀಟರ್ ಸಾಮರ್ಥ್ಯದ ರಾಸಾಯನಿಕ ಔಷಧ ತುಂಬಿದ ಟ್ಯಾಂಕ್ಗೆ ಅಳವಡಿಸಿ, ಭತ್ತದ ಗದ್ದೆಯಲ್ಲಿ ಹಾಯಿಸಿ ಔಷಧ ಸಿಂಪಡಿಸುವ ತಂತ್ರಜ್ಞಾನವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಹತ್ತಾರು ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಬ್ಬೊಬ್ಬರದ್ದೂ ಒಂದೊಂದು ವೈಶಿಷ್ಟ್ಯವಿದೆ.
ಬೆಂಗಳೂರಿನ ಜಕ್ಕೂರು ಸಮೀಪ ಇರುವ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ 2021ರ ಕೃಷಿ ಮೇಳ (2021 agricultural fair) ನಡೆಯುತ್ತಿದೆ. ಇಲ್ಲಿನ ಹಲವು ವೈಶಿಷ್ಟ್ಯಗಳಲ್ಲಿ ಡ್ರೋಣ್ ಸಹ ಒಂದು. ಐದಾರು ಕಂಪನಿಗಳು ತಮ್ಮ ಆವಿಷ್ಕಾರವನ್ನು ಇಲ್ಲಿ ಗ್ರಾಹಕರ ಆಯ್ಕೆಗೆ ಮುಂದಿಟ್ಟಿದ್ದಾರೆ.