ಬೆಂಗಳೂರು: ವಿಧಾನಸೌಧದಲ್ಲಿ ಸಚಿವರ ಕೊಠಡಿಗಳ ಬದಲಾವಣೆ ಪರ್ವ ಮುಂದುವರಿದಿದೆ.
ಲಕ್ಕಿ ಕೊಠಡಿ, ವಾಸ್ತು ಪ್ರಕಾರದಂತೆ ಈ ಮುಂಚೆ ಹಂಚಲಾದ ಕೊಠಡಿಯನ್ನು ಬದಲಾಯಿಸುವಂತೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಗಳ ಬಳಿ ಸಚಿವರುಗಳು ದುಂಬಾಲು ಬಿದ್ದಿದ್ದಾರೆ. ಇದೀಗ ಮತ್ತೆ ಮೂವರು ಸಚಿವರ ಕೊಠಡಿಯನ್ನು ಬದಲಾಯಿಸಿ, ಡಿಪಿಆರ್ ಇಲಾಖೆ ಆದೇಶ ಹೊರಡಿಸಿದೆ.
ಮತ್ತೆ ಕೆಲ ಸಚಿವರುಗಳ ವಿಧಾನಸೌಧ ಕೊಠಡಿ ಬದಲಾವಣೆ! ಸಚಿವರಾದ ವಿ.ಸೋಮಣ್ಣ, ಲಕ್ಷ್ಮಣ ಸವದಿ ಮತ್ತು ಪ್ರಭು ಚೌವಾಣ್ಗೆ ಈ ಹಿಂದೆ ನೀಡಲಾಗಿದ್ದ ಕೊಠಡಿಯನ್ನು ಬದಲಾಯಿಸಲಾಗಿದೆ. ಈ ಮುಂಚೆ ವಿ.ಸೋಮಣ್ಣ ಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ 314ರ ಕೊಠಡಿಯನ್ನು ಹಂಚಿಕೆ ಮಾಡಿತ್ತು. ಬಳಿಕ ಕೆ.ಎಸ್.ಈಶ್ವರಪ್ಪರಿಗೆ ಆ ಕೊಠಡಿಯನ್ನು ನೀಡಲಾಗಿತ್ತು. ವಿ.ಸೋಮಣ್ಣಗೆ 329ರ ಕೊಠಡಿಯನ್ನು ಹಂಚಿಕೆ ಮಾಡಾಲಾಗಿತ್ತು. ಆದರೆ, ಆ ಕೊಠಡಿಗೆ ಹೋಗಲು ಇಷ್ಟ ಪಡದ ವಿ.ಸೋಮಣ್ಣ ವಿಕಾಸಸೌಧದಲ್ಲಿ ಕೊಠಡಿ ನೀಡುವಂತೆ ಕೋರಿದ್ದರು. ಅದರಂತೆ ಈಗ ವಿ.ಸೋಮಣ್ಣಗೆ ವಿಕಾಸಸೌಧದಲ್ಲಿನ 143-146 ಕೊಠಡಿಯನ್ನು ಹಂಚಿಕೆ ಮಾಡಲಾಗಿದೆ.
ಇನ್ನು ಸಚಿವ ಲಕ್ಷ್ಮಣ ಸವದಿಗೆ ವಿಧಾನಸೌಧದಲ್ಲಿನ 301ರ ಕೊಠಡಿಯನ್ನು ನೀಡಲಾಗಿತ್ತು. ಆದರೆ ಅವರೂ ಕೊಠಡಿ ಬದಲಾವಣೆಗೆ ಮನವಿ ಮಾಡಿದ್ದರಿಂದ ಇದೀಗ ಅವರಿಗೆ ವಿಕಾಸಸೌಧದಲ್ಲಿನ 344-345 ಕೊಠಡಿ ಮರು ಹಂಚಿಕೆ ಮಾಡಲಾಗಿದೆ.
ಸಚಿವ ಪ್ರಭು ಚೌಹಾಣ್ಗೆ ಈ ಮುಂಚೆ ವಿಕಾಸಸೌಧದಲ್ಲಿನ 143-146 ಕೊಠಡಿ ನೀಡಲಾಗಿತ್ತು. ಆದರೆ, ಇದೀಗ ಅವರಿಗೆ ವಿಧಾನಸೌಧದಲ್ಲಿನ 329ರ ಕೊಠಡಿಯನ್ನು ಮರು ಹಂಚಿಕೆ ಮಾಡಲಾಗಿದೆ.