ಕರ್ನಾಟಕ

karnataka

ETV Bharat / city

ತೇಜಸ್ವಿನಿ ಅನಂತಕುಮಾರ್​ಗೆ ಟಿಕೆಟ್ ತಪ್ಪಿಸಲು ನಡೆದಿದೆಯಾ ಷಡ್ಯಂತ್ರ?! - Political leader

ತೇಜಸ್ವಿನಿ ಅನಂತಕುಮಾರ್​ಗೆ ಟಿಕೆಟ್ ತಪ್ಪಿಸಲು ನಾಯಕರೊಬ್ಬರು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ತೇಜಸ್ವಿನಿ ಅನಂತಕುಮಾರ್​ಗೆ ದ. ಬೆಂಗಳೂರಿನ ಟಿಕೆಟ್ ತಪ್ಪಿಸಲು ನಾಯಕರೊಬ್ಬರ ಷಡ್ಯಂತ್ರ

By

Published : Mar 22, 2019, 5:52 PM IST

ಬೆಂಗಳೂರು : ಬಿಜೆಪಿ ನಾಯಕ ದಿ. ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿಸುವಲ್ಲಿ ಪ್ರಭಾವಿ ನಾಯಕರೊಬ್ಬರು ಹರಸಾಹಸ ಪಡುತ್ತಿದ್ದಾರೆ ಎಂಬ ಕುತೂಹಲಕಾರಿ ಅಂಶ ಇದೀಗ ಸಾಕಷ್ಟು ಹರಿದಾಡುತ್ತಿದೆ.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುವ ಕನಸು ಹೊತ್ತಿರುವ ನಾಯಕರೊಬ್ಬರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಂಘಪರಿವಾರದ ಕಾರ್ಯಕರ್ತರಾದ ಸುರಾನಾ ಸೇರಿ ಹಲವರ ಹೆಸರುಗಳನ್ನು ತೇಲಿ ಬಿಟ್ಟಿದ್ದಾರೆ. ಈ ಪೈಕಿ ಯಾರಾದರೊಬ್ಬರಿಗೆ ಟಿಕೆಟ್ ನೀಡುವಂತೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರೇ ಕಣಕ್ಕಿಳಿಯಲಿದ್ದಾರೆ ಎಂಬ ಗಾಸಿಪ್ ಕೂಡಾ ಹಬ್ಬಿಸಲಾಗಿದೆ. ಇಂತಹ ಎಲ್ಲ ಕೆಲಸಗಳ ಮೂಲಕ ತೇಜಸ್ವಿನಿ ಅನಂತಕುಮಾರ್​​ಗೆ ಟಿಕೆಟ್ ಸಿಗದಂತೆ ಮಾಡುವುದು ಈ ನಾಯಕರ ಉದ್ದೇಶ ಎನ್ನಲಾಗ್ತಿದೆ.

ಇದೇ ನಾಯಕ ಕೆಲ ದಿನಗಳ ಹಿಂದೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡದಂತೆ ಸತತವಾಗಿ ಒತ್ತಡ ಹೇರಿದ್ದರು. ಒಂದು ಕಡೆಯಿಂದ ಯಡಿಯೂರಪ್ಪ ಮತ್ತವರ ಬೆಂಬಲಿಗರ ಶಕ್ತಿಯನ್ನು ಕಡಿಮೆ ಮಾಡಬೇಕು. ಮತ್ತೊಂದು ಕಡೆಯಿಂದ ರಾಜಧಾನಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರಿಗಿರುವ ಶಕ್ತಿಯನ್ನೂ ಕುಗ್ಗಿಸಬೇಕು ಎಂಬುದು ಈ ನಾಯಕರ ಮಾಸ್ಟರ್ ಪ್ಲಾನ್ ಎಂದು ಹೇಳಲಾಗುತ್ತಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ್ ಅವರ ಸತತ ಗೆಲುವಿಗೆ ಗಣನೀಯ ನೆರವು ನೀಡಿದ್ದ ಆರ್.ಅಶೋಕ್ ರಾಜಧಾನಿಯ ಮಟ್ಟಿಗೆ ಪ್ರಬಲ ನಾಯಕರಾಗಿದ್ದಾರೆ. ಆರ್. ಅಶೋಕ್, ಬಿ.ಎಸ್. ಯಡಿಯೂರಪ್ಪರಂತಹ ಘಟಾನುಘಟಿ ನಾಯಕರನ್ನೇ ಮೂಲೆಗುಂಪು ಮಾಡುವುದು ಈ ನಾಯಕರ ಉದ್ದೇಶ. ಈ ಪ್ಲಾನ್​ ಸಕ್ಸಸ್​ ಆದರೆ ಮುಂದಿನ ದಿನಗಳಲ್ಲಿ ಪಕ್ಷ ತಮ್ಮ ವಶಕ್ಕೆ ಬರುತ್ತದೆ. ಈ ಮೂಲಕ ಲೋಕಸಭೆ ಚುನಾವಣೆಯ ನಂತರ ತಮ್ಮ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡುವ ಹಪಾಹಪಿತನ ಈ ನಾಯಕರಿಗಿದೆ.ರಾಜ್ಯದ ಬಲಿಷ್ಠ ನಾಯಕರ ಶಕ್ತಿ ಕುಂದಿಸಿ, ತಾವು ಮೇಲೆದ್ದು ನಿಲ್ಲಲು ಈ ನಾಯಕ ಹವಣಿಸತೊಡಗಿದ್ದಾರೆ. ಇದೀಗ ಆ ದಾರಿಯಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೂ ಕಾಟ ಕೊಡತೊಡಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ದಿವಂಗತ ಅನಂತಕುಮಾರ್ ಅವರಿಗೆ ಒಳ್ಳೆಯ ಹೆಸರಿತ್ತು. ಒಂದು ವೇಳೆ ತೇಜಸ್ವಿನಿ ಅನಂತಕುಮಾರ್ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಸಹಜವಾಗಿಯೇ ಪ್ರಬಲರಾಗಬಹುದು. ಇದು ಆಗಬಾರದು ಎಂದು ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸುವುದೇ ಸೂಕ್ತ ಎಂದುಕೊಂಡಿದ್ದಾರೆ. ಇದಾದರೆ ಏಕಕಾಲಕ್ಕೆ ಅಶೋಕ್, ತೇಜಸ್ವಿನಿ ಅಂತಹ ನಾಯಕರು ರಾಜಧಾನಿಯಲ್ಲಿ ಪಾರಮ್ಯ ತೋರುವ ಅವಕಾಶ ತಪ್ಪುತ್ತದೆ ಎಂಬ ಈ ನಾಯಕರ ಲೆಕ್ಕಾಚಾರ ಹಲವರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ABOUT THE AUTHOR

...view details