ಬೆಂಗಳೂರು: ಲಾಕ್ಡೌನ್ ವೇಳೆ ಕಾರುಗಳ ಇಎಂಐ ಕಟ್ಟುವುದಾಗಿ ಮಾಲೀಕರನ್ನು ನಂಬಿಸಿ ಅವರಿಂದ ಅಸಲಿ ದಾಖಲೆಗಳನ್ನು ನೈಸಾಗಿ ಪಡೆದು ನೆರೆಯ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ವಂಚಕರ ಜಾಲವನ್ನು ನಗರ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕಾರುಗಳಿಗೆ ಇಎಂಐ ಪಾವತಿಸದ ಮಾಲೀಕರನ್ನು ಗುರಿಯಾಗಿಸಿಕೊಂಡು ನಯವಾಗಿ ಮಾತನಾಡಿ ಬ್ಯಾಂಕಿಗೆ ಮಾಡಿದ್ದ ಡೌನ್ ಪೇಮೆಂಟ್ ಹಣ ವಾಪಸ್ ನೀಡುವುದಾಗಿ ಹಾಗೂ ಇಎಂಐ ಹಣ ತಾವೇ ಪಾವತಿಸುವುದಾಗಿ ನಂಬಿಸಿ ಅವರಿಂದ ಕಾರು ಖರೀದಿಸುತ್ತಿದ್ದರು. ಬಳಿಕ ಆಂಧ್ರದಲ್ಲಿ ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಬೆಂಗಳೂರಿನ ನಿವಾಸಿ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಗೋವಿಂದಪುರ ನೂರ್ ಅಹಮದ್ ನೀಡಿದ ದೂರಿನ ಮೇರೆಗೆ ನಗರದ ಪ್ರೇಜರ್ ಟೌನ್ ನಿವಾಸಿ ಜೆ.ರಿಯಾಜ್, ಆಂಧ್ರಪ್ರದೇಶದ ಅನಂತಪುರದ ಶೇಖ್ ಮುಕ್ತಿಯಾರ್, ವೈ.ವಿನೋದ್ ಕುಮಾರ್, ರಮೇಶ್ ನಾಯ್ಡು, ನರಸಿಂಹ ರೆಡ್ಡಿ, ಟಿ.ಪ್ರಭಾಕರನ್ ಹಾಗೂ ಚಾಕ್ಲಿ ನರೇಶ್ ಎಂಬುರವನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ 4 ಕೋಟಿ ರೂ. ಮೌಲ್ಯದ 4 ಇನ್ನೋವಾ ಕ್ರಿಸ್ತಾ , 3 ಇನ್ನೋವಾ, 16 ಟೊಯೋಟಾ, 17 ಸ್ವಿಪ್ಟ್ ಡಿಸೈರ್ ಸೇರಿದಂತೆ ವಿವಿಧ ಕಂಪನಿಗಳ 48 ಕಾರುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ಆರೋಪಿ ರಿಯಾಜ್, ಶೇಖ್ ಮುಕ್ತಿಯಾರ್ ಕಾರು ಡೀಲರ್ ಹಾಗೂ ಬ್ರೋಕರ್ಗಳಾಗಿ ಕೆಲಸ ಮಾಡುತ್ತಿದ್ದರು. ಕೆಲವು ಕಾರುಗಳ ಮಾಲೀಕರು ಬ್ಯಾಂಕರ್ ಹಾಗೂ ಖಾಸಗಿ ಫೈನಾನ್ಸ್ ಗಳಲ್ಲಿ ಲೋನ್ ಮೇಲೆ ಖರೀದಿಸಿದ್ದ ಕಾರುಗಳ ಇಎಂಐ ಪಾವತಿಸಲು ಲಾಕ್ ಡೌನ್ ವೇಳೆ ಪರದಾಡುತ್ತಿದ್ದರು. ಇಂತಹವರನ್ನು ಗುರಿಯಾಗಿಕೊಳ್ಳುತ್ತಿದ್ದ ಆರೋಪಿ ರಿಯಾಜ್, ಕಾರು ಖರೀದಿ ವೇಳೆ ಮಾಡಿದ್ದ ಡೌನ್ ಪೇಮೆಂಟ್ ನೀಡುವುದಾಗಿ ಹಾಗೂ ಉಳಿದ ಇಎಂಐ ಪಾವತಿಸುವುದಾಗಿ ನಂಬಿಸಿ ದಾಖಲಾತಿಯೊಂದಿಗೆ ಕಾರನ್ನು ಖರೀದಿಸುತ್ತಿದ್ದ. ಇದೇ ವೇಳೆ ಕೇಂದ್ರ ಸರ್ಕಾರ ಮೂರು ತಿಂಗಳ ಕಾಲ ಇಎಂಐ ಪಾವತಿ ಕಡ್ಡಾಯವಲ್ಲ ಎಂದು ಅಧಿಸೂಚನೆ ಹೊರಡಿಸಿತ್ತು. ಇದನ್ನೇ ದುರ್ಬಳಕೆ ಮಾಡಿಕೊಂಡ ಈತ ಸಹಚರರ ನೆರವಿನಿಂದ ಕಾರುಗಳನ್ನು ನೆರೆಯ ಆಂಧ್ರಪ್ರದೇಶದ ಅನಂತಪುರದ ಆರ್ಟಿಒ ಕಚೇರಿಯಲ್ಲಿ ಅಕ್ರಮವಾಗಿ ಕಾರು ನೋಂದಣಿ ಮಾಡಿಸಿ, ಮಾರಾಟ ಮಾಡುತ್ತಿದ್ದ ಎನ್ನಲಾಗ್ತಿದೆ.
ಹೇಗೆ ಕಾರು ಮಾರಾಟ?
ಹತ್ತಾರು ಜನರಿಂದ ಕಾರುಗಳನ್ನು ಪಡೆದು ಅನಂತಪುರದ ಆರ್ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಏಜೆಂಟ್ ವಿನೋದ್ ಮೂಲಕ ಆತನ ಸಹಚರಾದ ರಮೇಶ್ ನಾಯ್ಡ, ನರಸಿಂಹ ರೆಡ್ಡಿ, ಪ್ರಭಾಕರನ್, ಚಾಕ್ಲಿ ನರೇಶ್ ಸಹಾಯದಿಂದ ಕರ್ನಾಟಕದಲ್ಲಿ ನೋಂದಾಯಿಸಿದ ಕಾರುಗಳ ನಾಮಫಲಕ ಬದಲಾಯಿಸಿ ಅನಂತಪುರದ ಎ.ಪಿ.-39 ಹೆಸರಿನಲ್ಲಿ ರಿಜಿಸ್ಟ್ರಾರ್ ಮಾಡಿಸಿ ಅಲ್ಲಿನ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದರು. ನಿಯಮದ ಪ್ರಕಾರ ರಾಜ್ಯದಿಂದ ಇನ್ನೊಂದು ರಾಜ್ಯದಲ್ಲಿ ವಾಹನಗಳನ್ನು ನೋಂದಾಯಿಸಬೇಕಾದರೆ ಮೊದಲು ಇಲ್ಲಿಂದ ಕ್ಲಿಯರೆನ್ಸ್ ಸರ್ಟಿಫೀಕೇಟ್ (ಸಿಸಿ) ಪಡೆದುಕೊಂಡು ಆ ರಾಜ್ಯದ ಆರ್ಟಿಒ ಕಚೇರಿಯಲ್ಲಿ ನೀರಪೇಕ್ಷಪಣಾ ಪತ್ರ (ಎನ್ಒಸಿ) ಪಡೆದುಕೊಂಡಿರಬೇಕು. ಬಳಿಕ ಬೇರೆಯವರಿಗೆ ಆ ವಾಹನಗಳ ಮಾರಾಟ ಮಾಡಲು ಅವಕಾಶವಿದೆ. ಆದರೆ ವಂಚಕರು ಈ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅನಂತಪುರದ ಡೆಪ್ಯೂಟಿ ಟ್ರಾನ್ಸ್ ಪೋರ್ಟ್ ಕಮಿಷನರ್ ಶಿವರಾಜ್ ಪ್ರಸಾದ್ ಅವರು, ಎನ್ಒಸಿ ಇಲ್ಲದೆ ನಕಲಿ ನೋಂದಣಿ ಮಾಡಿಸಿರುವ ಕಾರುಗಳನ್ನು ಪರಿಶೀಲನೆ ನಡೆಸಿ ಕೃತ್ಯಕ್ಕೆ ಸಹಕರಿಸುತ್ತಿದ್ದ ಆರ್ಟಿಒ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.