ಬೆಂಗಳೂರು:ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ತಬ್ಲೀಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 34 ವಿದೇಶಿಯರು ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಭಾರಿ ಆತಂಕ ಮೂಡಿಸಿದೆ. ತಬ್ಲೀಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ 34 ವಿದೇಶಿಯರು ರಾಜ್ಯದಲ್ಲಿ ಪತ್ತೆಯಾಗಿರುವ ವಿಷಯವನ್ನು ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರೇ ಖಚಿತಪಡಿಸಿದ್ದಾರೆ.
ದೆಹಲಿ ತಬ್ಲೀಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ 34 ವಿದೇಶಿಯರು ಕರ್ನಾಟಕದಲ್ಲಿ ಪತ್ತೆ! - ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ
ದೇಶದೆಲ್ಲೆಡೆ ಕೊರೊನಾ ವೈರಸ್ ಹರಡುವ ಭೀತಿ ಮೂಡಿಸಿರುವ ದೆಹಲಿಯ ತಬ್ಲೀಘಿ ಜಮಾತ್ ಸಭೆ ಈಗ ಕರ್ನಾಟಕಕ್ಕೂ ಆತಂಕ ತಂದಿದೆ. ಜಮಾತ್ನಲ್ಲಿ ಪಾಲ್ಗೊಂಡಿದ್ದ 34 ವಿದೇಶಿಯರು ರಾಜ್ಯದಲ್ಲಿ ಪತ್ತೆಯಾಗಿದ್ದು, ಅವರನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ.
ತಬ್ಲೀಘಿ ಜಮಾತ್ ಸಭೆ ಕೊರೊನಾ ಹರಡುವ ಪ್ರಮುಖ ಕೇಂದ್ರವಾಗಿ ಗುರುತಿಸಲ್ಪಟ್ಟ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ ಸರ್ಕಾರಗಳು ಅದರಲ್ಲಿ ಭಾಗಿಯಾಗಿ ಮರಳಿ ಬಂದವರ ಹುಡುಕಾಟದಲ್ಲಿ ತೊಡಗಿವೆ. ಈ ಸಭೆಯ ನಂತರ ರಾಜ್ಯಕ್ಕೆ ಬಂದಿರುವ ವಿದೇಶಿಗರನ್ನು ಪೊಲೀಸರು ಪತ್ತೆ ಮಾಡಿ ವಿಚಾರಿಸಿದಾಗ 34 ಜನ ಜಮಾತ್ನಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಇವರೆಲ್ಲರನ್ನು ಈಗ ಕ್ವಾರಂಟೈನ್ನಲ್ಲಿರಿಸಲಾಗಿದ್ದು, ಇನ್ನೂ ಕೆಲವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.
34 ವಿದೇಶಿಯರಲ್ಲಿ ಮಲೇಶಿದ 10, ಕಿರ್ಗಿಸ್ತಾನದ 10, ಇಂಡೋನೇಷ್ಯಾದ 11, ಫ್ರಾನ್ಸ್ನ 1, ಕೀನ್ಯಾದ 1, ಬ್ರಿಟನ್ನ ಓರ್ವ ಪ್ರಜೆ ಸೇರಿದ್ದಾರೆ. ಇವರು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದರು. ಸುಮಾರು 50 ವಿದೇಶಿಯರು ಕರ್ನಾಟಕಕ್ಕೆ ಬಂದಿರುವ ಮಾಹಿತಿ ಇದ್ದು, ಇನ್ನುಳಿದವರ ಶೋಧ ಕಾರ್ಯ ಮುಂದುವರೆದಿದೆ. ಹಾಗೆಯೇ ರಾಜ್ಯದಿಂದಲೂ ಕೆಲವರು ಜಮಾತ್ನಲ್ಲಿ ಭಾಗಿಯಾಗಿದ್ದು, ಅವರನ್ನೂ ಪತ್ತೆ ಮಾಡಲಾಗುತ್ತಿದೆ ಎಂದು ಸಚಿವ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.