ಬೆಂಗಳೂರು:ಮಳೆ ಹಾನಿ ಸಂಬಂಧ ಸುಮಾರು 130 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ಹಳೆ ಮೈಸೂರು ಭಾಗದಲ್ಲಿ ರಾಗಿ ಬೆಳೆ ಹಾನಿಯಾಗಿದೆ. ಬೆಳಗಾವಿ, ಉತ್ತರ ಕರ್ನಾಟಕ ಭಾಗ ಸೇರಿದಂತೆ, ಹಾಸನ, ಮೈಸೂರು, ಮಂಡ್ಯದಲ್ಲಿ ರಾಗಿಗೆ ಹೆಚ್ಚು ತೊಂದರೆಯಾಗಿದೆ. ಸದ್ಯ ಜಿಲ್ಲಾಧಿಕಾರಿಗಳೊಂದಿಗೆ ನಾನು ಹಾಗು ಸಿಎಂ ಚರ್ಚೆ ಮಾಡುತ್ತೇವೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ, ಪರಿಶೀಲಿಸಿ ಪರಿಹಾರದ ಬಗ್ಗೆ ವರದಿ ಕೊಡುವಂತೆ ಸೂಚನೆ ನೀಡಿದ್ದೇನೆ. ಚುನಾವಣಾ ನೀತಿ ಸಂಹಿತೆಯಿಂದ ನಾವು ಸ್ಥಳ ಪರಿಶೀಲನೆಗೆ ಹೋಗಲು ಆಗಲ್ಲ. ಹಾಗಾಗಿ ಶಾಸಕರು, ಸಚಿವರನ್ನು ಕರೆದುಕೊಂಡು ಹೋಗದೆ, ಅಧಿಕಾರಿಗಳ ತಂಡ ಹೋಗಿ ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.
ಬೆಳೆ ಪರಿಹಾರವಾಗಿ 130 ಕೋಟಿ ರೂ. ಬಿಡುಗಡೆ:
ಮನೆ ಹಾನಿಯಾದವರಿಗೆ 10 ಸಾವಿರ ರೂ. ಪರಿಹಾರ ಕೊಡಬೇಕು. ಬೆಳೆ ಪರಿಹಾರವಾಗಿ 130 ಕೋಟಿ ರೂ. ಬಿಡುಗಡೆ ಮಾಡುತ್ತಿದ್ದೇನೆ. ಈಗಾಗಲೇ ಜಿಲ್ಲೆಗಳನ್ನು ಗುರುತು ಮಾಡಿದ್ದೇವೆ. ರೈತರ ಖಾತೆಗೆ ಪರಿಹಾರದ ಹಣ ಹೋಗುತ್ತದೆ. ಯಾವ ಯಾವ ಬೆಳೆಗೆ ಎಷ್ಟು ಪರಿಹಾರ ಎಂಬುವುದರ ಬಗ್ಗೆ ಈಗಾಗಲೇ ಬೆಲೆ ನಿಗದಿಯಾಗಿದೆ. ಕಾಫಿ ಬೆಳೆಗಾರರಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಡಿಯಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಕೇಂದ್ರದಿಂದ ಈಗಾಗಲೇ 8 ವರ್ಷದಲ್ಲಿ NDRF ಅಡಿ 13,519 ಕೋಟಿ ರೂ., SDRF ಅಡಿ 2,922 ಕೋಟಿ ರೂ. ಬಿಡುಗಡೆ ಆಗಿದೆ. 151,429 ರೈತರಿಗೆ ಇನ್ ಪುಟ್ ಸಬ್ಸಿಡಿ ನೀಡಲಾಗಿದೆ. ಜುಲೈ, ಆಗಸ್ಟ್ ತಿಂಗಳ ಹಣ ಬಿಡುಗಡೆ ಮಾಡುತ್ತೇನೆ ಎಂದು ಸಚಿವ ಆರ್.ಅಶೋಕ್ ಭರವಸೆ ನೀಡಿದರು.
ಮಳೆ ಹಾನಿ ಪರಿಹಾರಕ್ಕೆ ಕೇಂದ್ರದಿಂದ ನೆರವು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮಳೆ ಹಾನಿ, ಬೆಳೆ ನಷ್ಟದ ಬಗ್ಗೆ ಸಮೀಕ್ಷೆಯಾಗುತ್ತಿದೆ. ಸಮೀಕ್ಷೆಯ ವರದಿ ಬಂದ ನಂತರ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಪರಿಹಾರದ ನೆರವು ಬಗ್ಗೆ ಮನವಿ ಮಾಡಲಾಗುವುದು ಎಂದರು.
ಇದನ್ನೂ ಓದಿ:ನೀತಿ ಸಂಹಿತೆ ಎಫೆಕ್ಟ್: ಜಿಲ್ಲಾಡಳಿತಗಳೊಂದಿಗಿನ ಸಿಎಂ ಸಭೆ ಮುಂದೂಡಿಕೆ