ಬೆಂಗಳೂರು: ರಾಜ್ಯದಲ್ಲಿ ನಿಧಾನವಾಗಿ ಕೊರೊನಾ ಸೋಂಕಿತರ ಸಂಖ್ಯೆ ಕಳೆದ 15 ದಿನಗಳಿಂದ ಇಳಿಕೆ ಕಂಡು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಐಸಿಯುಗೆ ದಾಖಲಾಗುತ್ತಿರುವವರ ಸಂಖ್ಯೆ ಮಾತ್ರ ಏರಿಕೆ ಆಗುತ್ತಿದೆ.
ಈಗ ಚಳಿಗಾಲವಾಗಿರುವುದರ ಜೊತೆಗೆ ಆಗೊಮ್ಮೆ-ಈಗೊಮ್ಮೆ ಬಿಸಿಲು, ಮಳೆ, ಗಾಳಿ ಹೀಗೆ ವಾತಾವರಣ ವೈಪರೀತ್ಯದಿಂದಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಈ ರೀತಿಯ ವಾತಾವರಣ ಅಪಾಯ ಅಂತ ಆರೋಗ್ಯ ವಲಯದ ತಜ್ಞರು ತಿಳಿಸಿದ್ದಾರೆ. ಹೀಗಾಗಿ, ಆರೋಗ್ಯ ಇಲಾಖೆಯು ಐಸಿಯು ವಾರ್ಡ್ ಗಳ ಹೆಚ್ಚಳ ಮಾಡಿಕೊಳ್ಳುತ್ತಿದೆ.
ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಬೆಂಗಳೂರಿನಲ್ಲಿ ಐಸಿಯು ಸೋಂಕಿತರ ಸಂಖ್ಯೆ ಕಡಿಮೆಯೇ ಆಗುತ್ತಿಲ್ಲ. ಸಾರಿ (SARI) ಪ್ರಕರಣ ಹೆಚ್ಚಳ ಹಿನ್ನೆಲೆ ಐಸಿಯು ಭರ್ತಿಯಾಗ್ತಿದೆ. ಹೀಗಾಗಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಐಸಿಯು ಬೆಡ್ ಗಳ ಸಂಖ್ಯೆಯನ್ನ ಹೆಚ್ಚಿಸುತ್ತಿದೆ. ಈಗಾಗಲೇ ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಇದಕ್ಕಾಗಿ ತಯಾರಿ ನಡೆದಿದ್ದು, ಕಂಟೈನ್ಮೆಂಟ್ ಐಸಿಯು ಯುನಿಟ್ ಸಿದ್ಧವಾಗಿದೆ. ಸುಮಾರು 100 ಬೆಡ್ ಗಳ ಐಸಿಯು ಆಸ್ಪತ್ರೆ ಇದಾಗಿದ್ದು, ಮುಂದಿನ ವಾರ ಸಿಎಂ ಯಡಿಯೂರಪ್ಪ ಉದ್ಟಾಟನೆ ಮಾಡಲಿದ್ದಾರೆ. ಪ್ರಾಥಮಿಕವಾಗಿ 50 ರೋಗಿಗಳಿಗೆ ಐಸಿಯು ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನ ಆರೋಗ್ಯ ಇಲಾಖೆ ಮಾಡಿಕೊಂಡಿದ್ದಾರೆ.
* ಕೆಸಿ ಜನರಲ್ ಆಸ್ಪತ್ರೆ-100
* ವಿಕ್ಟೋರಿಯಾ ಆಸ್ಪತ್ರೆ-32
* ಸಿವಿ ರಾಮನ್ ಆಸ್ಪತ್ರೆ-30
* ಐಸೋಲೇಶನ್ ಆಸ್ಪತ್ರೆ-30
* ಆನೇಕಲ್ ತಾಲ್ಲೂಕು ಆಸ್ಪತ್ರೆ-07
* ಕೆಆರ್ ಪುರ ತಾಲೂಕು ಆಸ್ಪತ್ರೆ-07
* ಯಲಹಂಕ ತಾಲೂಕು ಆಸ್ಪತ್ರೆ-07
ಒಟ್ಟು 223 ಬೆಂಗಳೂರಿನಲ್ಲಿ ಹೆಚ್ಚಳವಾಗುತ್ತಿದೆ.