ಬಳ್ಳಾರಿ:ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಮುಂಡರಗಿಯಲ್ಲಿ ಸುಸಜ್ಜಿತ ಮಹಾತ್ಮ ಗಾಂಧೀಜಿ ಲೇಔಟ್ ತಲೆ ಎತ್ತಲಿದ್ದು, ಇನ್ನೊಂದು ವರ್ಷದಲ್ಲಿ ಬಡ ಕೂಲಿಕಾರ್ಮಿಕರು ಹಾಗೂ ನಿವೇಶನ ರಹಿತರಿಗೆ ಈ ಮನೆಗಳನ್ನು ಹಸ್ತಾಂತರಿಸಲು ಪಾಲಿಕೆ ನಿರ್ಧರಿಸಿದೆ.
ಮುಂಡರಗಿಯಲ್ಲಿ ಬಡ ಕೂಲಿಕಾರ್ಮಿಕರಿಗಾಗಿ ತಲೆಎತ್ತಲಿದೆ ಮಹಾತ್ಮ ಗಾಂಧೀಜಿ ಲೇಔಟ್ ನಗರದಲ್ಲಿನ ಕೂಲಿಕಾರ್ಮಿಕರು, ಬಡವರು ಹಾಗೂ ನಿವೇಶನ ರಹಿತರು ಪ್ರತಿ ತಿಂಗಳು ಬಾಡಿಗೆ ಕಟ್ಟಲಾಗದೇ ಪರದಾಡುತ್ತಿರುವುದನ್ನು ಮನಗಂಡ ಮಹಾನಗರ ಪಾಲಿಕೆ, ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ಜಿ + 2 ವಿನ್ಯಾಸದಡಿ ಮನೆಗಳನ್ನು ನಿರ್ಮಿಸಲು ಮುಂದಾಗಿದೆ. ಅಂದಾಜು 5,200 ಮನೆಗಳು ಈ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದ್ದು, ಸಕಾಲದಲ್ಲಿ ವಂತಿಗೆ ಪಾವತಿಸುವ ಅರ್ಹ ಫಲಾನುಭವಿಗಳಿಗೆ ಈ ಮನೆಗಳ ಹಂಚಿಕೆ ಮಾಡಲಾಗುತ್ತದೆ. ಜಿ + 2 ಮಾದರಿಯ 180 ಮನೆಗಳು ಈಗಾಗಲೇ ರೆಡಿಯಾಗಿವೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ, ಜಿ+ 2 ಮಾದರಿಯ ಮನೆಗಳ ನಿರ್ಮಾಣ ಕಾರ್ಯ ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಯಾರ್ಯಾರು ವಂತಿಗೆ ಪಾವತಿಸಿಲ್ಲ ಅವರಿಗೆ ವಂತಿಗೆ ಪಾವತಿಸಲು ಸಮಯಾವಕಾಶ ಕಲ್ಪಿಸಲಾಗಿದೆ. ಸಕಾಲದಲ್ಲಿ ವಂತಿಗೆ ಪಾವತಿಸಿದರೆ ಮನೆಗಳ ಹಂಚಿಕೆ ಬಹುಬೇಗನೇ ಮಾಡಲಾಗುವುದು. ಈ ಕೋವಿಡ್ ಸಂದರ್ಭದಲ್ಲಿ ಮನೆಗಳ ನಿರ್ಮಾಣ ಕಾರ್ಯ ಆಮೆ ಗತಿಯಲ್ಲಿ ಸಾಗಿತ್ತು. ಕಾರ್ಮಿಕರ ಸಮಸ್ಯೆ, ಹಣಕಾಸಿನ ಸಮಸ್ಯೆಯೂ ಇತ್ತು. ಅದನ್ನ ಸಮರ್ಥವಾಗಿ ನಿಭಾಯಿಸುವ ಕಾರ್ಯವನ್ನು ಮಹಾನಗರ ಪಾಲಿಕೆ ಮಾಡಿದೆ ಎಂದರು.
ನಾಗಾರ್ಜುನ ಕನ್ಸ್ಸ್ಟ್ರಕ್ಷನ್ ಎಂಜಿನಿಯರ್ ಹರ್ಷವರ್ಧನ ಮಾತನಾಡಿ, ಅತ್ಯಂತ ಸುಸಜ್ಜಿತ ಲೇಔಟ್ ಇದಾಗಲಿದೆ. ಎರಡು ವರ್ಷದ ಅವಧಿಯಲ್ಲಿ ಈ ಪ್ರಾಜೆಕ್ಟ್ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಬೇಕಿತ್ತು. ಈಗಾಗಲೇ ಅಂದಾಜು 180 ಮನೆಗಳು ಪೂರ್ಣಗೊಂಡಿವೆ. ಇನ್ನೊಂದು ವರ್ಷದಲ್ಲಿ ಈ ಲೇಔಟ್ ಚಿತ್ರಣವೇ ಬದಲಾಗಲಿದೆ. ಇಲ್ಲಿ ಮಿನಿ ಟೌನ್ಶಿಫ್ ತಲೆಎತ್ತಲಿದೆ ಎಂದು ತಿಳಿಸಿದರು.