ಹೊಸಪೇಟೆ:ವಿಜಯನಗರ ಸಾಮ್ರಾಜ್ಯ ರಚನೆಗೆ ತನ್ನದೇ ವಿಶಿಷ್ಟ ಕೊಡುಗೆ ನೀಡಿದ್ದ ಕಂಪ್ಲಿ ಬಳ್ಳಾರಿ ಜಿಲ್ಲೆಯ ವಿಭಜನೆಯಿಂದಾಗಿ ಗತಕಾಲಕದ ಭವ್ಯ ಇತಿಹಾಸದ ನಂಟನ್ನು ಕಳೆದುಕೊಳ್ಳಲಿದೆ.
ವಿಜಯನಗರ ಸ್ಥಾಪನೆಗೆ ಕಂಪ್ಲಿ ಗಂಡುಗಲಿ ಕುಮಾರರಾಮ ಪ್ರೇರಣೆಯಾಗಿದ್ದರು. ಕುಮಾರರಾಮನ ಕಾಲದಲ್ಲಿ ಹಕ್ಕ-ಬುಕ್ಕರು ಸೇನಾಧಿಕಾರಿಗಳಾಗಿದ್ದರು. ಅಲ್ಲಿನ ಆಡಳಿತ ನೈಪುಣ್ಯತೆಯನ್ನು ಪಡೆದುಕೊಂಡು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮುಂದಾಗುತ್ತಾರೆ. ಆದರೆ, ಈಗ ವಿಜಯನಗರ ಜಿಲ್ಲೆ ರಚನೆಯಿಂದ ಕಂಪ್ಲಿ ಬಳ್ಳಾರಿ ಜಿಲ್ಲೆಗೆ ಸೇರಿಕೊಳ್ಳಲಿದೆ. ಇದರಿಂದ ಇತಿಹಾಸದ ನಂಟನ್ನು ಕಂಪ್ಲಿ ಇನ್ಮುಂದೆ ಕಳೆದುಕೊಳ್ಳಲಿದೆ ಎನ್ನುವ ಮಾತುಗಳು ಈ ಭಾಗದಲ್ಲಿ ಕೇಳಿಬರುತ್ತಿವೆ.
ವಿಜಯನಗರ ಕಾಲದ ಪೂರ್ವದಲ್ಲಿ ಕಂಪ್ಲಿಯು ಆಡಳಿತ ಕೇಂದ್ರವಾಗಿತ್ತು. ಇತಿಹಾಸದಲ್ಲಿ ಇದರ ಉಲ್ಲೇಖವನ್ನು ಕಾಣಬಹುದು. ಕಂಪ್ಲಿ ಹಾಗೂ ಹೊಸಪೇಟೆಗೆ ಐತಿಹಾಸಿಕ ಮತ್ತು ಭಾವನಾತ್ಮಕ ನಂಟು ಇದೆ. ಅದು ವಿಜಯನಗರ ಜಿಲ್ಲೆ ರಚನೆಯಿಂದ ಕಳೆದು ಹೋಗಲಿದೆ.
1799 ರಲ್ಲಿ ಟಿಪ್ಪು ಸುಲ್ತಾನ ಮರಣ ನಂತರ ಬಳ್ಳಾರಿ ಜಿಲ್ಲೆ ರಚನೆಯಾಯಿತು. 1800ರಲ್ಲಿ ಬಳ್ಳಾರಿ ಜಿಲ್ಲಯಲ್ಲಿ 20 ತಾಲೂಕು ಕೇಂದ್ರಗಳಿದ್ದವು. 1800 ರಿಂದ 1859 ರವರೆಗೆ ಕಂಪ್ಲಿ ತಾಲೂಕು ಕೇಂದ್ರವಾಗಿತ್ತು. ಆ ಸಂದರ್ಭದಲ್ಲಿ ಹೊಸಪೇಟೆ ಒಂದು ಸಣ್ಣ ಹಳ್ಳಿಯಾಗಿತ್ತು. ನಂತರ ತಾಲೂಕು ಕೇಂದ್ರವನ್ನಾಗಿ ಮಾಡಲಾಯಿತು. ಪಶ್ಚಿಮ ತಾಲೂಕುಗಳಿಗಾಗಿ ಹೊಸಪೇಟೆಯಲ್ಲಿ ಉಪವಿಭಾಗದ ಕಚೇರಿಯನ್ನು ತೆರೆಯಲಾಯಿತು.