ಹೊಸಪೇಟೆ:ರಾಜ್ಯದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಿದ ಅನರ್ಹ ಶಾಸಕರಿಗೆ ಮತದಾರರು ಸರಿಯಾಗಿ ಪಾಠ ಕಲಿಸಬೇಕು ಎಂದು ಮಾಜಿ ಸ್ಪೀಕರ್ ಆರ್.ರಮೇಶ್ ಕುಮಾರ್ ಮನವಿ ಮಾಡಿದರು.
ನಗರದ ಉಮರ ಸಂಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆ. ಇದು ತಾಯಿಗೆ ದ್ರೋಹ ಮಾಡಿದಂತೆ. ಮತದಾರರು ಅವರಿಗೆ ತಕ್ಕ ಪಾಠ ಕಲಿಸಲೆಂದೇ ಅವರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ ಎಂದು ಹೇಳಿದರು.
ಮಾಜಿ ಸ್ಪೀಕರ್ ಆರ್.ರಮೇಶ್ಕುಮಾರ್ ರಾಜೀನಾಮೆ ಪತ್ರವನ್ನು ಶಾಸಕರು ಬೇಕಾಬಿಟ್ಟಿ ಬರೆದು ತಮ್ಮ ಸ್ಥಾನವನ್ನು ಮಾರಿಕೊಂಡಿದ್ದಾರೆ. ಅಂತಹವರನ್ನು ಮತ್ತೆ ಕ್ಷೇತ್ರದಲ್ಲಿ ಕಾಲಿಡಲು ಬಿಡಬಾರದು. ರಾಜೀನಾಮೆ ನೀಡುವುದಕ್ಕಾಗಿಯೇ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ಈ ದ್ರೋಹದ ಕೆಲಸಕ್ಕೆ ದೇವರು ಯಾವತ್ತೂ ಕ್ಷಮಿಸುವುದಿಲ್ಲ. ರೈತರ ಸಮಸ್ಯೆಗಳಿಗೆ, ಮಹಿಳೆಯರಿಗೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅಲ್ಲ ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತದಾನ ಮಾಡುವಾಗ ಎಚ್ಚರಿಕೆಯಿಂದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆಸೆ-ಆಮಿಷಗಳಿಗೆ ಬಲಿಯಾಗಬೇಡಿ ಎಂದು ಸಲಹೆ ನೀಡಿದರು.