ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ವಡ್ಡು ಗ್ರಾಮದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಾಲಕಿಯ ಮನೆಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಭೇಟಿ ನೀಡಿ, ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದರು.
ತೋರಣಗಲ್ಲು ಬಳಿಯ ವಡ್ಡು ಗ್ರಾಮಕ್ಕೆ ಉಗ್ರಪ್ಪ ಭೇಟಿ ಬಳಿಕ ಮಾತನಾಡಿದ ಉಗ್ರಪ್ಪ, ಇದೊಂದು ಅಮಾನವೀಯ ಘಟನೆ. ನಾಗರಿಕ ಸಮಾಜದಲ್ಲಿ ಮಕ್ಕಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ಸಂವಿಧಾನದ 21ನೇ ವಿಧಿಯ ಪ್ರಕಾರ ಜೀವಿಸುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪಡೆದುಕೊಂಡಿದ್ದೇವೆ. ಸಂಡೂರು ತಾಲೂಕಿನಲ್ಲಿ ಇದು ಎರಡನೇ ಘಟನೆಯಾಗಿದೆ. ಪೊಲೀಸ್ ಇಲಾಖೆಯ ಶ್ವಾನದಳ ಈಗಾಗಲೇ ತಪಾಸಣೆ ಮಾಡಿದ್ದು, ಸುಮಾರು ಐದು ಸಿಸಿ ಕ್ಯಾಮರಾಗಳ ಫೂಟೇಜ್ ಪರಿಶೀಲಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಡಿವೈಎಸ್‍ಪಿ ತಿಳಿಸಿದ್ದಾರೆ ಎಂದರು.
ಮೃತ ಬಾಲಕಿಯ ಸಾವಿಗೆ ಸರ್ಕಾರದಿಂದ ಪರಿಹಾರ ನೀಡುವ ವಿಚಾರವಾಗಿ ಬಳ್ಳಾರಿ ಜಿಲ್ಲಾಧಿಕಾರಿ, ಎಸ್‍ಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರ ಬಳಿ ಚರ್ಚಿಸಿದ್ದೇನೆ. ಆದರೆ, ಇಲ್ಲಿನ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನ ಸೂಚನಾ ಆದೇಶಗಳನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಪರಿಹಾರ ವಿಳಂಬವಾಗಿದೆ ಹಾಗೂ ಪಾಲಕರು ತುಂಬ ಬಡವರಾಗಿದ್ದು, ಸರ್ಕಾರದ ತಕ್ಷಣ ಪರಿಹಾರವನ್ನು ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದಿಂದ ಪರಿಹಾರವನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಡೂರು ತಾಲೂಕಿನ ಪ್ರಭಾರಿ ಸಿಪಿಐ ಟಿ.ಆರ್.ಅಹಮ್ಮದ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಮಗುವಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಈ ವೇಳೆ ಸರಿಯಾಗಿ ಅಹಮ್ಮದ್ ಸರಿಯಾಗಿ ಸ್ಪಂದಿಸದ ಹಿನ್ನೆಲೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಉಷಾ, ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ರಾಮಕೃಷ್ಣ, ಸಹಾಯಕ ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ, ಗ್ರಾಮದ ಮುಖಂಡರಾದ ಉಮೇಶ, ಮಡಿವಾಳ ಹಳ್ಳದಪ್ಪ, ಶಂಕ್ರಪ್ಪ ಉಪಸ್ಥಿತರಿದ್ದರು.