ಬಳ್ಳಾರಿ :ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅಗಸನೂರಿನಲ್ಲಿ ಮೊಹರಂ ಹಬ್ಬದ ಆಚರಣೆಯು ವಿಶಿಷ್ಟವಾಗಿ ಜರುಗಿತು. ಮೊಹರಂ ಆಚರಣೆಯ ಹಿನ್ನೆಲೆಯಲ್ಲಿ ಇಲ್ಲಿ ಗುದ್ದಲಿ ಹಾಕಿದ ನಂತರದ 10 ದಿನಗಳ ಕಾಲ ಮದ್ಯ, ಮಾಂಸ ನಿಷೇಧ, ಹೆಣ್ಣು ಮಕ್ಕಳು ಹೂ ಮುಡಿಯುವಂತಿಲ್ಲ, ಗ್ರಾಮಸ್ಥರು ಚಪ್ಪಲಿ ಧರಿಸುವಂತಿಲ್ಲ, ಗಂಡ-ಹೆಂಡತಿ ಸಂಸಾರ ಮಾಡುವಂತಿಲ್ಲ, ಮಂಚದ ಮೇಲೆ ಮಲಗುವಂತಿಲ್ಲ, ಇಂತಹ ನಿಯಮಗಳನ್ನು ಪಾಲಿಸಿ ಮೊಹರಂ ಹಬ್ಬವನ್ನು 10 ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಕೋಮು ಸೌಹಾರ್ದತೆಯ ಮೊಹರಂ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿಯೂ 9ನೇ ದಿನ ರಾತ್ರಿ ಆಚರಣೆ ಮಾಡುವುದು ಸಾಮಾನ್ಯ. ಆದರೆ ಈ ಗ್ರಾಮದಲ್ಲಿ 7ನೇ ದಿನ ಆಚರಣೆಯನ್ನು ಹಗಲು ಹೊತ್ತಿನಲ್ಲಿಯೇ ಆಚರಿಸುವುದು ಇಲ್ಲಿನ ವಿಶಿಷ್ಟತೆಯಾಗಿದೆ. ಹಗಲು ಸರಗಸ್ತಿಯ ಅಂಗವಾಗಿ ಗ್ರಾಮಸ್ಥರು ಪೀರಲದೇವರ ದೇವಸ್ಥಾನದ ಹತ್ತಿರದ ಅಂಗಳದಲ್ಲಿ ಪೀರಲ ದೇವರ ಕುರಿತಾದ ಮೇಲ್ಪದಗಳನ್ನು ಹಾಡುತ್ತಾರೆ. ಹಾಡುಗಾರರ ಹಾಡಿಗೆ ಭಕ್ತರು ಕೈಯಲ್ಲಿ ಸಣ್ಣ ಬಿಂದಿಗೆ ಹಿಡಿದು ಹೆಜ್ಜೆ ಹಾಕುತ್ತ ಸುತ್ತು ಹಾಕುತ್ತಾ ಹಾಡುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ.
7ನೇ ದಿನದಂದು ಮಧ್ಯಾಹ್ನದ ನಂತರ ಮಸೀದಿ ಮುಂದೆ ಹಲಗೆ ಬಾರಿಸುತ್ತ ಭಕ್ತರು ತಂಡೋಪ ತಂಡವಾಗಿ ಅಲಾಯಿ ಕುಣಿಯುತ್ತ ಮೈಮರೆಯುತ್ತಾರೆ. ಕೈಗಳಲ್ಲಿ ವಿವಿಧ ಬಣ್ಣಗಳ ಧ್ವಜಗಳನ್ನು ಹಿಡಿದಿರುತ್ತಾರೆ. 101 ಹಲಗೆಗಳನ್ನು ಬಾರಿಸುವ ವ್ಯಕ್ತಿಗಳೂ ಅಲಾಯಿ ಕುಣಿಯ ಸುತ್ತಲೂ ಕುಣಿತದ ಹೆಜ್ಜೆಗಳನ್ನು ಹಾಕುವ ಭಕ್ತರು ವಿಶಿಷ್ಟವಾಗಿ ಕಂಡುಬರುತ್ತಾರೆ.