ಬಳ್ಳಾರಿ:ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮದಲ್ಲಿಂದು ಮನೆ ಕುಸಿತದಿಂದಾಗಿ ವೃದ್ಧ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಪರಿಹಾರ ಧನ ವಿತರಣೆ ಕುರಿತು ನಿರ್ಧರಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.
ಮನೆ ಕುಸಿದು ವೃದ್ಧ ಸಾವು ಶಂಕೆ: ಶವ ಪರೀಕ್ಷೆಯಲ್ಲಿ ಖಚಿತವಾದ್ರೆ ಮಾತ್ರ ಪರಿಹಾರ ಎಂದ ಬಳ್ಳಾರಿ ಡಿಸಿ
ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ ಕುಸಿದು, ವೃದ್ಧ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಆದರೆ ವೃದ್ಧನ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲದ ಕಾರಣ, ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಪರಿಹಾರ ಧನ ವಿತರಣೆ ಕುರಿತು ನಿರ್ಧರಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ ಕುಸಿದು, ವೃದ್ಧ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಮನೆಯ ಕುಸಿದು ಬಿದ್ದು ಸತ್ತಿದ್ದರೆ, ಆ ವ್ಯಕ್ತಿಗೆ ಗಾಯಗಳಾಗಬೇಕಿತ್ತು. ಆದರೆ ಈ ಘಟನೆಯಲ್ಲಿ ಅದ್ಯಾವುದು ಕಂಡು ಬರುತ್ತಿಲ್ಲ. ಅಲ್ಲದೇ ಅವರಿಗೆ ಆರೋಗ್ಯ ಸರಿಯಿರಲಿಲ್ಲ ಎಂಬ ಮಾಹಿತಿಯೂ ದೊರೆತಿದೆ. ಹನುಮನಹಳ್ಳಿ ಗ್ರಾಮಕ್ಕಿಂದು ಅಧಿಕಾರಿಗಳು ಭೇಟಿ ನೀಡಿದ್ದು, ಮೃತದೇಹವನ್ನು ಹೊಸಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನಷ್ಟೇ ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ, ಬಳಿಕ ಪರಿಹಾರ ಧನ ವಿತರಣೆಯ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದರು.
ಅಲ್ಲದೇ, ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಹೋಬಳಿಯ ನಾನಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಕುರುಗೋಡು ತಾಲೂಕಿನ ಗೆಣಿಕೆಹಾಳ್ ಗ್ರಾಮದ ಸುತ್ತಮುತ್ತಲಿನ ಅಂದಾಜು 1,200 ಎಕರೆ ಪ್ರದೇಶ ವ್ಯಾಪ್ತಿಯ ಹೊಲ, ಗದ್ದೆಗಳು ಮಳೆಯಿಂದಾಗಿ ಜಲಾವೃತಗೊಂಡಿದ್ದು, ಅಪಾರ ಪ್ರಮಾಣ ಬೆಳೆನಷ್ಟ ಉಂಟಾಗಿರುವ ಮಾಹಿತಿ ಕೂಡ ಇದೆ. ಈ ಕುರಿತು ಕೃಷಿ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳಿಗೆ ಸಮೀಕ್ಷೆ ಮಾಡುವಂತೆ ಸೂಚನೆ ಡಿಸಿ ನಕುಲ್ ತಿಳಿಸಿದರು.