ಬಳ್ಳಾರಿ:ಜಿಲ್ಲೆಯಾದ್ಯಂತ ಕೇಬಲ್ ಅಪರೇಟರ್ಗಳು ಅನಾವಶ್ಯಕವಾಗಿ ಹೆಚ್ಚುವರಿ ಹಣ ವಸೂಲಿ ಮಾಡುವ ಪ್ರಕರಣಗಳು ಕಂಡುಬಂದಲ್ಲಿ ಕೇಬಲ್ ಅಪರೇಟರ್ಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎ.ಎಸ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ನಗರದ ಅಪರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಾನಲ್‍ಗಳು ನಿಗದಿಪಡಿಸಿದ ಹಣವನ್ನು ಮಾತ್ರ ಕೇಬಲ್ ಅಪರೇಟರ್ಗಳು ಗ್ರಾಹಕರಿಂದ ಪಡೆದುಕೊಳ್ಳಬೇಕು. ಅದಕ್ಕೆ ಸರಿಯಾದ ರಶೀದಿ ನೀಡಬೇಕು. ಒಂದು ವೇಳೆ ಹೆಚ್ಚುವರಿ ಹಣ ವಸೂಲಿ ಮಾಡಿರುವುದು ಕಂಡುಬಂದಲ್ಲಿ ಅಂತಹ ಕೇಬಲ್ ನಿರ್ವಾಹಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಕೇಬಲ್ ಸೌಲಭ್ಯ ಪಡೆದುಕೊಂಡಾಗ ಪಾವತಿಸಬೇಕಾದ ಕನಿಷ್ಠ ಹಣ, ಇಷ್ಟದ ಚಾನಲ್‍ಗಳು ಆಯ್ಕೆ ಮಾಡಿಕೊಂಡಾಗ ಪಾವತಿಸಬೇಕಾದ ಹಣವನ್ನಷ್ಟೆ ಗ್ರಾಹಕರಿಂದ ಪಡೆಯಬೇಕು ಮತ್ತು ಅದನ್ನು ಪಾವತಿ ಮಾಡಿಕೊಂಡಿರುವುದಕ್ಕೆ ರಶೀದಿ ನೀಡಬೇಕು. ರಶೀದಿ ನೀಡುವುದನ್ನು ಬಿಟ್ಟು ಕೇಬಲ್ದಾರರು ನೋಟ್ ಬುಕ್ನಲ್ಲಿ ಬರೆದುಕೊಳ್ಳುವುದು ಕಂಡುಬರುತ್ತಿದೆ. ಇನ್ಮುಂದೆ ಈ ರೀತಿ ನಡೆಯುವುದಿಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ.
ಈ ಬಗ್ಗೆ ದೂರುಗಳೇನಾದರೂ ಇದ್ದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಲಾಗಿರುವ ದೂರುಕೋಶ (08392-275198)ಕ್ಕೆ ಹಾಗೂ ಜನಸ್ಪಂದನ ದೂರುಕೋಶಕ್ಕೂ(ದೂ: 08392-277100 ಹಾಗೂ ಮೊ:8277888866) ದೂರು ಸಲ್ಲಿಸಬಹುದಾಗಿದೆ.
ಇಲ್ಲಿನ ದೂರುಗಳನ್ನು ಕ್ರೋಢೀಕರಿಸಿ ಸಭೆಯಲ್ಲಿ ಮಂಡಿಸಿ ತೀರ್ಮಾನಿಸಲಾಗುವುದು. ಬಳ್ಳಾರಿ ಜಿಲ್ಲೆಯಲ್ಲಿ ಈ ರೀತಿಯ ಯಾವುದೇ ರೀತಿಯ ದೂರುಗಳು ಸಲ್ಲಿಕೆಯಾಗಿರವುದಿಲ್ಲ ಎಂದು ಮಾಹಿತಿ ನೀಡಿದ್ದು, ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ದೂರುಕೋಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಚಾರ ನೀಡುವಂತೆ ಜಿಲ್ಲಾ ವಾರ್ತಾಧಿಕಾರಿಗಳಿಗೆ ಎಡಿಸಿ ಮಂಜುನಾಥ್ ಸೂಚಿಸಿದ್ದಾರೆ.