ಚಿಕ್ಕೋಡಿ (ಬೆಳಗಾವಿ) :ಮದುವೆ ಮಂಟಪದಲ್ಲಿ ಸಾಮಾನ್ಯವಾಗಿ ತಳಿರು ತೋರಣ ಸೇರಿದಂತೆ ಅಲಂಕಾರಿಕ ವಸ್ತುಗಳಿಂದ ಮಂಟಪವನ್ನು ಸುಂದರಗೊಳಿಸಿರುತ್ತಾರೆ.
ಆದರೆ, ಇಲ್ಲೊಂದು ಮದುವೆ ಸಮಾರಂಭದಲ್ಲಿ ದಿ. ಪುನೀತ್ ರಾಜ್ಕುಮಾರ್ ಭಾವಚಿತ್ರವನ್ನಿಟ್ಟು ಪೂಜಿಸಿ ಅವರ ಫೋಟೋ ಎದುರೇ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆ ಮಂಟಪದಲ್ಲಿ ಪುನೀತ್ ರಾಜ್ಕುಮಾರ್ ಭಾವಚಿತ್ರವಿಟ್ಟು ಅಭಿಮಾನ ವ್ಯಕ್ತಪಡಿಸಿದ್ದಾರೆ.
ದಿ.ಪುನೀತ್ ರಾಜ್ಕುಮಾರ್ ಭಾವಚಿತ್ರದ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆಳಗಾವಿ ಜೋಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಮಹಾಂತೇಶ ಹಾಗೂ ಸಾನ್ವಿ ಇಂದು ವಿವಾಹವಾದರು. ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಎಲ್ಲರು ಅಗಲಿದ ನಟನಿಗೆ ಗೌರವ ಸಲ್ಲಿಸಿದರು. ಜೊತೆಗೆ ಪುನೀತ್ ಭಾವಚಿತ್ರದ ಎದುರೇ ಆರತಕ್ಷತೆ ಕಾರ್ಯಕ್ರಮ ನಡೆಸಿದ್ದು, ಅಭಿಮಾನಿಗಳ ಹೃದಯದಲ್ಲಿ ಅಪ್ಪು ನೆಲೆಸಿರುವುದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಘೋಷಣೆಯಾಗುತ್ತಾ ಆರೆಂಜ್ ಅಲರ್ಟ್?: ಮೊದಲ ಹಂತದಲ್ಲಿ 50:50 ಸೂತ್ರ ಜಾರಿಗೆ ಸರ್ಕಾರ ಚಿಂತನೆ
ಈ ನವ ಜೋಡಿಗೆ ಶುಭ ಹಾರೈಸಲು ಬಂದ ಜನರು ಕೂಡ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗಮನ ಸೆಳೆದರು. ಅಲ್ಲದೇ ಪುನೀತ್ ಅಭಿಮಾನಿಗಳು ಜೋಡಿಗೆ ಪುನೀತ್ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಹಾರೈಸಿದರು. ಪುನೀತ್ ಅವರು ಎಂದೆಂದಿಗೂ ನಮ್ಮ ಹೃದಯದಲ್ಲಿರುತ್ತಾರೆ ಅಂತಿದ್ದಾರೆ ಅಭಿಮಾನಿಗಳು.