ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಅಥಣಿ ಅತಿ ದೊಡ್ಡ ತಾಲೂಕು ಕೇಂದ್ರ. ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ರಾಜಕೀಯ ನೆಲೆ ಕೊಟ್ಟ ಕ್ಷೇತ್ರವೂ ಹೌದು. ವಿಪರ್ಯಾಸವೆಂದರೆ ಕಳೆದ ಐದು ವರ್ಷಗಳಿಂದ ಅಥಣಿ ಪೊಲೀಸ್ ಠಾಣೆಗೆ ಕ್ರೈಂ ವಿಭಾಗದ ಪಿಎಸ್ಐ ನೇಮಕವಾಗಿಲ್ಲ. ಹೀಗಾಗಿ ಅಥಣಿ ತಾಲೂಕಿನಲ್ಲಿ ಅಪರಾಧಿಕ ಕೃತ್ಯಗಳು ಹೆಚ್ಚುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ತಾಲೂಕಿನ ವ್ಯಾಪ್ತಿಗೆ 54 ಹಳ್ಳಿಗಳಿವೆ. ಅಥಣಿ ಪಟ್ಟಣ ಶೈಕ್ಷಣಿಕ, ವಾಣಿಜ್ಯ, ಭೌಗೋಳಿಕ ಹಾಗೂ ಆರ್ಥಿಕವಾಗಿ ಬೆಳೆಯುತ್ತಿದೆ. ಇಲ್ಲಿ ಕೇವಲ ಒಂದೇ ಒಂದು ಪೊಲೀಸ್ ಠಾಣೆ ಇದೆ. ಜನಸಂಖ್ಯೆ ಆಧಾರದ ಮೇಲೆ ಈವರೆಗೆ ಪೊಲೀಸ್ ಠಾಣೆ ಹೆಚ್ಚಿಸಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಳೆದ ಐದು ವರ್ಷಗಳಿಂದ ಅಪರಾಧ ವಿಭಾಗದ ಪಿಎಸ್ಐ ಸ್ಥಾನ ಕೂಡ ಖಾಲಿ ಇದೆ. ಒಬ್ಬರೇ ಪಿಎಸ್ಐ ಅಥಣಿಯಲ್ಲಿದ್ದಾರೆ. ಅಪರಾಧ ಮತ್ತು ಟ್ರಾಫಿಕ್ ಎರಡೂ ಒಬ್ಬರೇ ನೋಡಿಕೊಳ್ಳುತ್ತಿದ್ದಾರೆ.
ಸವದಿ ಸಾಹೇಬರೇ ಅಥಣಿ ಪೊಲೀಸ್ ಠಾಣೆಗೆ ಕ್ರೈಂ ಪಿಎಸ್ಐ ನೇಮಕ ಯಾವಾಗ? ಈಗ ಒಂದು ತಿಂಗಳ ಹಿಂದೆ ಅಥಣಿ ಪಿಎಸ್ಐ ಉಸ್ಮಾನ ಅವಟಿ ಅಮಾನತು ಆದ ಮೇಲೆ ಆ ಸ್ಥಳದಲ್ಲಿ ಈವರೆಗೆ ಯಾರನ್ನೂ ನೇಮಕ ಮಾಡಿಲ್ಲ. ಹಾಗಾಗಿ ಅಥಣಿ ಸಿಪಿಐ ಶಂಕರಗೌಡ ಬಸಗೌಡ್ರ ಅವರಿಗೆ ಪ್ರಭಾರಿಯಾಗಿ ಜವಾಬ್ದಾರಿ ವಹಿಸಲಾಗಿದೆ.
ಸದ್ಯ ಅಥಣಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಇಲ್ಲದ್ದಕ್ಕೆ ಪಟ್ಟಣದಲ್ಲಿ ಹೆಚ್ಚಾಗಿ ಟ್ರಾಫಿಕ್ ಕಿರಿಕಿರಿ ಆಗುತ್ತಿದೆ. ಈ ಟ್ರಾಫಿಕ್ ಕಿರಿಕಿರಿಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕಳೆದ ಐದು ವರ್ಷಗಳಿಂದ ಅಪರಾಧ ವಿಭಾಗದ ಪಿಎಸ್ಐ ಇಲ್ಲದೇ ಇರುವುದರಿಂದ ಅಥಣಿ ಪಟ್ಟಣದಲ್ಲಿ ತುಂಬಾ ತೊಂದರೆಯಾಗುತ್ತಿದೆ. ಈವರಗೆ ಅಥಣಿ ಪಟ್ಟಣದಲ್ಲಿ ಅಪರಾಧ ವಿಭಾಗದಲ್ಲಿ ಒಟ್ಟು 11 ಪಿಎಸ್ಐಗಳು ಕಾರ್ಯನಿರ್ವಹಿಸಿದ್ದಾರೆ. ಅಥಣಿ ಪಟ್ಟಣದ ಅಪರಾಧ ವಿಭಾಗಕ್ಕೆ ಕೆ ಎನ್ ಹಲಗಲಿ ಅವರು ನವೆಂಬರ 07, 2004ರಲ್ಲಿ ಮೊದಲ ಅಪರಾಧ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿದ್ದರು.
2017ರಲ್ಲಿ 109, 2018 ರಲ್ಲಿ 90, ಹಾಗೂ 2019 ರಲ್ಲಿ 93 ಅಪರಾಧ ಪ್ರಕರಣಗಳು ಈ ಠಾಣೆಯಲ್ಲಿ ದಾಖಲಾಗಿವೆ. ಆದಷ್ಟು ಬೇಗ ಈ ಪೊಲೀಸ್ ಠಾಣೆ ಅಪರಾಧ ವಿಭಾಗಕ್ಕೆ ಪಿಎಸ್ಐ ಅವರನ್ನು ನೇಮಕ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.