ಬೆಳಗಾವಿ: ಆರ್ಎಸ್ಎಸ್ನವರು ತಮ್ಮ ಸ್ವಂತಕ್ಕೆ ಏನನ್ನು ಮಾಡಿಕೊಳ್ಳದೇ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ತಮ್ಮನ್ನೇ ತಾವು ದೇಶಕ್ಕೆ ಸಮರ್ಪಣೆ ಮಾಡಿಕೊಂಡಿದ್ದಾರೆ. ಅವರ ಆಶೀರ್ವಾದದಿಂದ ಬಿಜೆಪಿ ಪಕ್ಷ ನಡೆಯುತ್ತಿದ್ದು, ನಾನು ಒಬ್ಬ ಸ್ವಯಂಸೇವಕ ಅಂತ ಹೇಳಿಕೊಳ್ಳಲು ಬಹಳ ಹೆಮ್ಮೆಯಾಗುತ್ತದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ದೊಡ್ಡವರು ಉತ್ತರ ಕೊಟ್ಟಿದ್ದಾರೆ. ಆದ್ರೆ, ಆರ್ಎಸ್ಎಸ್ನವರು ದೇಶಕ್ಕಾಗಿ ತಮ್ಮನ್ನೇ ತಾವು ಸಮರ್ಪಣೆ ಮಾಡಿಕೊಂಡಿದ್ದಾರೆ. ಅವರೇನು ಸ್ಟಾರ್ ಹೋಟೆಲ್‌ನಲ್ಲಿ ಇರಲ್ಲ, ವಿಮಾನದಲ್ಲಿ ಓಡಾಡುವುದಿಲ್ಲ. ಅತ್ಯಂತ ಕಟ್ಟ ಕಡೆಯ ಮನುಷ್ಯ ಯಾವ ರೀತಿ ಜೀವನ ಮಾಡ್ತಾನೆ, ಆ ರೀತಿ ತಮ್ಮ ಜೀವನ ತ್ಯಾಗ ಮಾಡಿದ್ದಾರೆ. ದೇಶದ ಸಲುವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡವರ ಕುರಿತು ಬೇರೆಯವರು ಮಾತನಾಡುವ ನೈತಿಕತೆ ಇಲ್ಲ ಎಂದರು.
ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಕೊಡುಗೆ ಏನು ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಏನೋ ಮಾತನಾಡ್ತಾರೆ ಅಂದ್ರೆ ಎಲ್ಲಕ್ಕೂ ಉತ್ತರ ಕೊಡಲು ಹೋಗುವುದಿಲ್ಲ. ನಾವು ದೇಶಕ್ಕಾಗಿ ಏನು ಮಾಡುತ್ತಿದ್ದೇವೆ ಎಂಬುವುದು ಮುಖ್ಯವಾಗಿದೆ. ಒಬ್ಬ ಮುತ್ಸದ್ದಿ ನೇತಾರ ಯಾವ ರೀತಿ ಇರಬೇಕೆಂಬುದು ಮೋದಿಯವರಿಗೆ ಬರುತ್ತಿರುವ ಪರ್ಸೆಂಟೇಜ್ ಆಫ್ ವೋಟ್‌ನಿಂದ ಗೊತ್ತಾಗ್ತದೆ.
ಆರ್‌ಎಸ್ಎಸ್ ನವರ ಆಶೀರ್ವಾದದಿಂದ ಬಿಜೆಪಿ ಪಕ್ಷ ನಡೆಯುತ್ತಿದೆ. ನಾನು ಒಬ್ಬ ಸ್ವಯಂಸೇವಕ, ಅವರ ಆಶೀರ್ವಾದದಿಂದ ನಾನು ಕೈಗಾರಿಕಾ ಸಚಿವನಾದೆ ಅಂತಾ ಹೇಳಿಕೊಳ್ಳಲು ಬಹಳ ಹೆಮ್ಮೆಯಾಗುತ್ತದೆ. ಅವರ ಬಗ್ಗೆ ಮಾತನಾಡೋದು ಸರಿಯಲ್ಲ, ಕಾಂಗ್ರೆಸ್ನವರು ಆಳವಾಗಿ ತಿಳಿದುಕೊಂಡು ಮಾತನಾಡಬೇಕು ಎಂದು ನಿರಾಣಿ ಹೇಳಿದರು.
ಮುಂಬರುವ ದಿನಗಳಲ್ಲಿ ವಿಜಯೇಂದ್ರನಿಗೆ ರಾಜಕೀಯ ಭವಿಷ್ಯವಿದೆ: ಹೈಕಮಾಂಡ್ಗೆ ನಾವು ಕಳುಹಿಸಿದ ಹೆಸರುಗಳಲ್ಲಿ ಪರಿಷತ್ಗೆ ಅಭ್ಯರ್ಥಿಗಳ ಆಯ್ಕೆ ಮಾಡಿದ್ದಾರೆ. ಕೋರ್ ಕಮಿಟಿ ಕಳುಹಿಸಿದ ಹೆಸರುಗಳನ್ನೇ ಹೈಕಮಾಂಡ್ ಅಂತಿಮ ಮಾಡಿದೆ. ರಾಜ್ಯದಿಂದ 20 ಜನರ ಹೆಸರು ಕಳುಹಿಸಿದ್ದೇವೆ. ಇದರಲ್ಲಿ ನಾಲ್ಕು ಜನರನ್ನ ಹೈಕಮಾಂಡ್ ಆಯ್ಕೆ ಮಾಡಿದೆ. ಎಲ್ಲಾ ರೀತಿಯ ವಿಭಾಗ, ಜಾತಿ ಆಧಾರದ ಲೆಕ್ಕಾಚಾರ ಮಾಡಿ ಆಯ್ಕೆ ಮಾಡಲಾಗಿದೆ.