ಬೆಳಗಾವಿ:ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು ಭಕ್ತರು ಹಾಕಿದ ಕಾಣಿಕೆಯಿಂದ 1.18 ಕೋಟಿ ರು. ಹಣ ಸಂಗ್ರಹವಾಗಿದೆ. ಅಲ್ಲದೇ, 17.39 ಲಕ್ಷ ರೂ. ಮೌಲ್ಯದ ಚಿನ್ನವನ್ನು ದೇವಿಗೆ ಸಮರ್ಪಿಸಿದ್ದಾರೆ.
2020ರ ಅ.26ರಿಂದ ಡಿ.10ರ ಅವಧಿಯಲ್ಲಿ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ದೇವಸ್ಥಾನ ಆಡಳಿತ ಮಂಡಳಿ, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ 2.20 ಲಕ್ಷ ರೂ.ಗಳ ಮೌಲ್ಯದ ಬೆಳ್ಳಿ ಕೂಡ ಸಂಗ್ರಹವಾಗಿದೆ. 500 ಹಾಗೂ 1000 ರೂ. ಮುಖಬೆಲೆಯ ರದ್ದಾದ ಹಳೆ ನೋಟುಗಳನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ. ಇದರ ಜೊತೆಗೆ 1 ವಿದೇಶಿ ಕರೆನ್ಸಿ ಕೂಡ ಪತ್ತೆಯಾಗಿದೆ.
ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ, 'ಈ ಬಾರಿ ಹುಂಡಿಯಲ್ಲಿ ದಾಖಲೆ ಮೊತ್ತ ಸಂಗ್ರಹವಾಗಿದೆ. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲಾಗುವುದು' ಎಂದು ತಿಳಿಸಿದ್ದಾರೆ.
ಹುಂಡಿ ಎಣಿಕೆ ವೇಳೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ಪುಂಡಲೀಕ ಮೇಟಿ, ಕೊಳ್ಳಪ್ಪಗೌಡ ಗಂದಿಗವಾಡ, ವೈ.ವೈ.ಕಾಳಪ್ಪನವರ್, ಎಂಜಿನಿಯರ್ ಎ.ವಿ.ಮೂಳ್ಳೂರ್, ಅಧೀಕ್ಷಕ ಬಾಳೇಶ ಅಬ್ಬಾಯಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅರವಿಂದ್ ಮಳಗೆ, ನಾಗರತ್ನಾ ಚೋಳಿನ, ಎಂ.ಎಸ್.ಯಲಿಗಾರ್, ಎಂ.ಪಿ.ದ್ಯಾಮನಗೌಡ್ರ, ಪ್ರಕಾಶ ಪ್ರಭುನವರ್, ವಿ.ಪಿ.ಸೊನ್ನದ, ಪ್ರಭು ಹಂಜಗಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಇದ್ದರು.
ಇದನ್ನೂ ಓದಿ:'ಭಾರತದಲ್ಲಿ ಭಯವಿದ್ದರೆ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋಗಲಿ': ಜಾರ್ಖಂಡ್ ಶಾಸಕ