ಕರ್ನಾಟಕ

karnataka

By

Published : Jan 7, 2022, 3:26 PM IST

Updated : Jan 7, 2022, 3:56 PM IST

ETV Bharat / city

ಬೆಳಗಾವಿ : ಎಪಿಎಂಸಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಖಾಸಗಿ ಮಾರ್ಕೆಟ್​​ ಆರಂಭ.. ವ್ಯಾಪಾರಸ್ಥರ ನಡುವೆ ಗುದ್ದಾಟ

ಸರ್ಕಾರದ ಹಿಡಿತದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಎರಡು ಗುಂಪುಗಳಾಗಿವೆ. ಒಂದು ಗುಂಪು ಮಾರ್ಕೆಟ್​ನಿಂದ ಹೊರ ಬಂದು ಖಾಸಗಿಯಾಗಿ ಮಾರುಕಟ್ಟೆ ನಿರ್ಮಿಸಿಕೊಂಡು ಇದೀಗ ವ್ಯಾಪಾರ, ವಹಿವಾಟು ಆರಂಭಿಸಿದೆ..

new privet market opened near apmc market at belagavi
ಬೆಳಗಾವಿ ಎಪಿಎಂಸಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಖಾಸಗಿ ಮಾರ್ಕೆಟ್​​ ಆರಂಭ

ಬೆಳಗಾವಿ: ಬೆಳಗಾವಿಯ ಬಾಜಿ ಮಾರುಕಟ್ಟೆ ರಾಜ್ಯವಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲೂ ಹೆಸರು ವಾಸಿ‌. ಅರ್ಧ ಗೋವಾ ರಾಜ್ಯ ಬೆಳಗಾವಿ ತರಕಾರಿ ಮಾರುಕಟ್ಟೆ ಮೇಲೆ ಅವಲಂಬಿಸಿರುವುದಲ್ಲದೇ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ಇನ್ನೂ ಅನೇಕ ರಾಜ್ಯಗಳಿಗೆ ಇಲ್ಲಿಂದಲೇ ತರಕಾರಿ ಪೂರೈಕೆ ಆಗುತ್ತದೆ. ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ತರಕಾರಿ ಮಾರುಕಟ್ಟೆ ಬೆಳಗಾವಿಯದ್ದಾಗಿದೆ. ಆದ್ರೀಗ ವ್ಯಾಪಾರಸ್ಥರ ನಡುವೆಯೇ ಗುದ್ದಾಟ ಶುರುವಾಗಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಎರಡು ಗುಂಪು :ಸರ್ಕಾರದ ಹಿಡಿತದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಎರಡು ಗುಂಪುಗಳಾಗಿವೆ. ಒಂದು ಗುಂಪು ಮಾರ್ಕೆಟ್​ನಿಂದ ಹೊರ ಬಂದು ಖಾಸಗಿಯಾಗಿ ಮಾರುಕಟ್ಟೆ ನಿರ್ಮಿಸಿಕೊಂಡು ಇದೀಗ ವ್ಯಾಪಾರ, ವಹಿವಾಟು ಆರಂಭಿಸಿದೆ.

ಬೆಳಗಾವಿ ಎಪಿಎಂಸಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಖಾಸಗಿ ಮಾರ್ಕೆಟ್​​ ಆರಂಭ

2006ರಿಂದಲೂ ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲೇ ಜಮೀನು ಪಡೆದು ಅಲ್ಲಿ ಮಾರುಕಟ್ಟೆ ಮಾಡಲು ಕೆಲ ವ್ಯಾಪಾರಸ್ಥರು ಹಣ ಹೂಡಿಕೆ ಮಾಡಿದ್ದರು. ಜೈ ಕಿಸಾನ್ ವೋಲ್‌ಸೇಲ್ ವೆಜಿಟೇಬಲ್ ಮರ್ಚಂಟ್ ಅಸೋಸಿಯೇಷನ್ ಹೆಸರಿನಲ್ಲಿ ಅನುಮತಿ ಪಡೆಯಲು ಸಾಕಷ್ಟು ಹರಸಾಹಸ ಪಟ್ಟು 15 ವರ್ಷದಿಂದ ಪ್ರಯತ್ನಿಸುತ್ತಾ ಬಂದಿದ್ರು.

2019ರಲ್ಲಿ ಖುದ್ದು ಶಾಸಕ ಅಭಯ್ ಪಾಟೀಲ್ ಇದು ಅನಧಿಕೃತವಾಗಿದೆ. ಜೈ ಕಿಸಾನ್ ವೋಲ್‌ಸೇಲ್ ವೆಜಿಟೇಬಲ್ ಮರ್ಚಂಟ್ ಅಸೋಸಿಯೇಷನ್​ಗೆ ಮಾರುಕಟ್ಟೆ ಸ್ಥಾಪಿಸಲು ಅನುಮತಿ ನೀಡಬೇಡಿ ಅಂತಾ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರ ಜೊತೆಗೆ ಎನ್ಎ ಲೇಔಟ್ ಕೂಡ ಸತ್ತವರ ಹೆಸರಿನಲ್ಲಿ ಮಾಡಲಾಗಿದೆ. ಮಹಾನಗರ ಪಾಲಿಕೆಯಿಂದ ಕಟ್ಟಡದ ಅನುಮತಿ ಕೂಡ ನೀಡಿರಲಿಲ್ಲ.

ಜೈ ಕಿಸಾನ್ ವೋಲ್‌ಸೇಲ್ ತರಕಾರಿ ಮಾರುಕಟ್ಟೆ :ಆದ್ರೆ, ಇದೀಗ ಎಪಿಎಂಸಿ ಕಾಯ್ದೆ ರಾಜ್ಯದಲ್ಲಿ ಜಾರಿ ಇರುವುದರಿಂದ ಸರ್ಕಾರದಿಂದ ಅನುಮತಿ ಪಡೆದುಕೊಂಡು ಜನವರಿ ಮೂರರಂದು ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಜೈಕಿಸಾನ್ ವೋಲ್‌ಸೇಲ್ ತರಕಾರಿ ಮಾರುಕಟ್ಟೆ ಆರಂಭಿಸಿದ್ದಾರೆ.

ಈ ಹಿಂದೆ ವಿರೋಧ ಮಾಡಿದ್ದ ಶಾಸಕ ಅಭಯ್ ಪಾಟೀಲ್ ಅವರೇ ಈ ಮಾರುಕಟ್ಟೆಯನ್ನು ಉದ್ಘಾಟನೆ ಮಾಡಿದ್ರೆ, ಇನ್ನೂ ಕೇವಲ ಒಂದೇ ತಿಂಗಳಲ್ಲಿ ಎಲ್ಲದ್ದಕ್ಕೂ ಅನುಮತಿ ಹೇಗೆ ಸಿಕ್ತು? ಅನ್ನೋ ಪ್ರಶ್ನೆ ಎದ್ದಿದೆ. ಅಧಿಕಾರಿಗಳು ಭಾಗಿಯಾಗಿ ಹಣದ ಆಸೆಗೆ ಈ ರೀತಿ ಯಾವುದೇ ನಿಯಮ ಪಾಲನೆ ಮಾಡದ ಖಾಸಗಿ ಮಾರುಕಟ್ಟೆಗೆ ಅನುಮತಿ ನೀಡಿದ್ದು ಸಂಶಯಕ್ಕೆ ಕಾರಣವಾಗಿದೆ.

ಮೂವರು ಅಧಿಕಾರಿಗಳ ವಿರುದ್ಧ ದೂರು :ಈಗಾಗಲೇ ಮೂವರು ಅಧಿಕಾರಿಗಳ ಮೇಲೆ ಎಸಿಬಿಯಲ್ಲಿ ದೂರು ನೀಡಿದ್ದೇವೆ ಅಂತಾ ಹಳೇ ಮಾರುಕಟ್ಟೆಯ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಇನ್ನೂ ಜ.11ರವರೆಗೂ ಹೊಸ ಮಾರ್ಕೆಟ್ ಬಂದ್ ಮಾಡಲು ಗಡುವು ಕೊಟ್ಟಿದ್ದು ಒಂದು ವೇಳೆ ಬಂದ್ ಮಾಡದಿದ್ರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಇಲ್ಲ ಕಾನೂನು ಕೈಗೆ ತೆಗೆದುಕೊಂಡ್ರೆ ಅದಕ್ಕೆ ಅಧಿಕಾರಿಗಳೇ ಜವಾಬ್ದಾರರೆಂದು ಎಚ್ಚರಿಕೆ ನೀಡಿದ್ದಾರೆ.

ಖಾಸಗಿಯವರಿಗೆ ಹೊಸದಾಗಿ ಮಾರುಕಟ್ಟೆ ಆರಂಭಿಸಲು ಹೇಗೆ ಅನುಮತಿ ನೀಡಿದ್ದೀರಿ ಎಂದು ಕೇಳಿದ್ರೆ, ಅನುಮತಿಯನ್ನು ಸರ್ಕಾರವೇ ನೀಡಿದೆ. ಇದಕ್ಕೂ ನಮಗೂ ಸಂಬಂಧ ಇಲ್ಲ ಅಂತಾ ಎಪಿಎಂಸಿ ಕಾರ್ಯದರ್ಶಿ ಹೇಳ್ತಾರೆ. 2019ರಲ್ಲಿ ಹೊಸದಾಗಿ ಯಾವುದೇ ಮಾರುಕಟ್ಟೆಗೆ ಅನುಮತಿ ನೀಡಬಾರದು ಅಂತಾ ಎಪಿಎಂಸಿಯಲ್ಲಿ ರೆಸ್ಯೂಲೂಷನ್ ಕೂಡ ಪಾಸ್ ಆಗಿದೆ.

ಆ ನಿಯಮ ಕೂಡ ಇಲ್ಲಿ ಗಾಳಿಗೆ ತೂರಲಾಗಿದೆ. ಆದ್ರೆ, ಇದ್ಯಾವುದು ನಮ್ಮ ವ್ಯಾಪ್ತಿಗೆ ಬರಲ್ಲ, ನಾವು ಸರ್ಕಾರಕ್ಕೆ ಎಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದೇವೆಂದು ಹೇಳಿ ಅಧಿಕಾರಿಗಳು ಜಾರಿಕೊಳ್ತಿದ್ದಾರೆ.

ಇತ್ತ ನೂತನವಾಗಿ ಆರಂಭವಾದ ಜೈ ಕಿಸಾನ್ ವೋಲ್‌ಸೇಲ್ ವೆಜಿಟೇಬಲ್ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷರನ್ನು ಕೇಳಿದ್ರೆ, ಕೋರ್ಟ್​ನಲ್ಲಿದ್ದ ಕೇಸ್​ಗಳೆಲ್ಲವನ್ನೂ ಮುಗಿಸಿಕೊಂಡು ಇದೀಗ ಸರ್ಕಾರದ ಅನುಮತಿಯನ್ನು ಪಡೆದು ನಾವು ಮಾರುಕಟ್ಟೆ ಆರಂಭಿಸಿದ್ದೇವೆ.

ಹಳೇ ಮಾರುಕಟ್ಟೆಯವರ ಬಳಿ ರೈತರು ಹೋಗ್ತಿಲ್ಲ. ಹಾಗಾಗಿ, ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಆ ಮಾರುಕಟ್ಟೆ ಬಂದ್ ಆಗಲಿ ಅಂತಾ ನಾವು ಹೇಳಲ್ಲ, ಬೇಕಾದ್ರೆ ಅವರು ನಮ್ಮ ಜೊತೆಗೆ ಪೈಪೋಟಿ ಮಾಡಲಿ ಅಂತಾ ಸವಾಲ್ ಹಾಕ್ತಿದ್ದಾರೆ.

ಇದನ್ನೂ ಓದಿ:ಅನುದಾನ ಹಂಚಿಕೆಯಲ್ಲಿ ತಾರತಮ್ಯ.. ಸಿಎಂ ಕಚೇರಿ ಮುಂದೆ ಧರಣಿ.. ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಇಬ್ಭಾಗವಾಗಿ ಇದೀಗ ವ್ಯಾಪಾರಸ್ಥರ ನಡುವೆ ಗದ್ದಲ ಶುರುವಾಗಿದೆ. ರಾಜ್ಯ, ಹೊರ ರಾಜ್ಯಕ್ಕೆ ತರಕಾರಿ ಸಪ್ಲೈ ಆಗುತ್ತಿದ್ದು ಅದರ ಮೇಲೆ ಏನೂ ಪರಿಣಾಮ ಬೀರದೇ ರೈತರಿಗೆ ಸೂಕ್ತ ಬೆಲೆ ಸಿಕ್ರೇ ಸಾಕು ಅನ್ನೋದು ರೈತರ ಆಗ್ರಹವಾಗಿದೆ.

ಹೊಸ ಮಾರುಕಟ್ಟೆಯಲ್ಲಿ ಗೋಲ್‌ಮಾಲ್ ಕೂಡ ಆಗಿದೆ ಅನ್ನೋ ಆರೋಪವಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಿ ಪ್ರಕರಣಕ್ಕೆ ತೆರೆ ಎಳೆಯುವ ಕೆಲಸವನ್ನು ಬೆಳಗಾವಿ ಜಿಲ್ಲಾಡಳಿತ ಮಾಡಬೇಕಿದೆ.

Last Updated : Jan 7, 2022, 3:56 PM IST

ABOUT THE AUTHOR

...view details