ಬೆಳಗಾವಿ: ಪಕ್ಷ ನಿಷ್ಠೆ, ಹಿಂದುತ್ವ, ಸೀನಿಯಾರಿಟಿ ಒಮ್ಮೊಮ್ಮೆ ಅನಿವಾರ್ಯ ಕಾರಣದಿಂದ ಕೌಂಟ್ ಆಗೋದಿಲ್ಲ ಎಂದು ಸಚಿವ ಸ್ಥಾನ ಸಿಗದಿದ್ದಕ್ಕೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಿನ್ನೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಇರುವಷ್ಟು ಕಾರ್ಯಕರ್ತರು ಬೇರೆ ಯಾರ ಕ್ಷೇತ್ರದಲ್ಲೂ ಇಲ್ಲ. ಆದರೆ ಯಾವೊಬ್ಬ ಕಾರ್ಯಕರ್ತರು ರಸ್ತೆಗಿಳಿದು ಹೇಳಿಕೆ ಕೊಟ್ಟಿಲ್ಲ. ಪಕ್ಷದ ಶಿಸ್ತಿದೆ. ಪಕ್ಷ ನಮಗೆ ಬಹಳಷ್ಟು ಕೊಟ್ಟಿದೆ. ಪಕ್ಷದ ತೀರ್ಮಾನದ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.
ನನಗೂ ದಂಡಯಾತ್ರೆ ಮಾಡೋಕೆ ಬರುತ್ತೆ, ಸುಮ್ಮನಿರುವುದೇ ದೌರ್ಬಲ್ಯವಲ್ಲ; ಬಿಜೆಪಿ ಶಾಸಕ ಅಭಯ್ ಪಾಟೀಲ್ ಬೇಸರ ನನಗೂ ಎಲ್ಲ ದಂಡಯಾತ್ರೆ ಮಾಡಲು ಬರುತ್ತೆ, ಅದು ನನ್ನ ದೌರ್ಬಲ್ಯ ಅಲ್ಲ. ಆದರೆ, ಆ ದಂಡಯಾತ್ರೆ ಮಾಡಲು ನನಗೆ ಇಚ್ಛೆ ಇಲ್ಲ. ಸಾಮರ್ಥ್ಯ ಶಕ್ತಿ ಇಲ್ಲ. ಅಂತೇನಿಲ್ಲ. ಎಲ್ಲವೂ ಇದೆ. ಗಡಿಯಲ್ಲಿ ಎಂತ ರಾಜಕೀಯ ಪರಿಸ್ಥಿತಿ ಇದ್ದರೂ ರಾಜ್ಯದ ಹಿತ ಕಾಪಾಡುವ ಕೆಲಸ ಮಾಡಿದ್ದೇವೆ. ಇದನ್ನು ಬಹಳಷ್ಟು ಜನ ಗಮನಕ್ಕೆ ತಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯೇ ಬೇರೆ, ಬೆಳಗಾವಿ, ಖಾನಾಪುರ ತಾಲೂಕಿನ ರಾಜಕೀಯ ಪರಿಸ್ಥಿತಿ ಬೇರೆ. ಪಕ್ಷ ನಿಷ್ಠೆ, ಹಿಂದುತ್ವ, ಸೀನಿಯಾರಿಟಿ ಒಮ್ಮೊಮ್ಮೆ ಅನಿವಾರ್ಯ ಕಾರಣದಿಂದ ಕೌಂಟ್ ಆಗೋದಿಲ್ಲ. 90ರ ದಶಕದಿಂದ ಕಾರ್ಯಕರ್ತರರಾಗಿ ಹಿಂದುತ್ವದ ಪರ ಕೆಲಸ ಮಾಡಿದ್ದೇನೆ. ಕಾರ್ಯಕರ್ತರು ಬೇಸರ ವ್ಯಕ್ತಪಡಿಸುವುದು ಸಹಜ. ಆದ್ರೆ ರಾಜ್ಯದ ನಾಯಕರು ಯೋಗ್ಯರು, ಸಮರ್ಥರು, ಭ್ರಷ್ಟಾಚಾರ ರಹಿತ, ಕಳಂಕರಹಿತರ ನೇಮಿಸಬೇಕೆಂದು ನಿರ್ಧಾರ ಕೈಗೊಂಡಿದ್ದಾರೋ ಅದನ್ನು ಸ್ವಾಗತಿಸುವೆ ಎಂದು ಪರೋಕ್ಷವಾಗಿ ರಾಜ್ಯ ಬಿಜೆಪಿ ನಾಯಕರಿಗೆ ಶಾಸಕ ಅಭಯ್ ಪಾಟೀಲ್ ಟಾಂಗ್ ನೀಡಿದರು.
ಇದನ್ನೂ ಓದಿ: ಬೆಳಗಾವಿಗೆ ಇನ್ನೂ ಹೆಚ್ಚು ಸಚಿವ ಸ್ಥಾನ ನೀಡಬೇಕಾಗಿತ್ತು:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ನೀಡದ ವಿಚಾರಕ್ಕೆ, ಯಾವುದೇ ಸರ್ಕಾರದ ಮಂತ್ರಿಮಂಡಲ ಇದ್ದರೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಪಾಲು ಸಿಗುತ್ತದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗಬೇಕಿತ್ತು, ಯಾರಿಗಾದರೂ ಕೊಡಬೇಕಾಗಿತ್ತು ಎಂಬುದು ನನ್ನ ಅನಿಸಿಕೆ. ನನಗೆ ಈ ಹಿಂದೆ ನಿಗಮ ಮಂಡಳಿ ಕೊಡ್ತೀನಿ ಅಂತಾ ಕೇಳಿದ್ರು. ನಾನು ನಿಗಮ ಮಂಡಳಿ ಆಗಲಿ, ಸರ್ಕಾರದ ಮುಖ್ಯಸಚೇತಕ ಸ್ಥಾನಕ್ಕಾಗಲಿ ಯಾವುದಕ್ಕೂ ಆಸೆ ಪಟ್ಟಿಲ್ಲ. ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡ್ತೀನಿ ಅಂದರೂ ಬೇಡ. ಮತ್ಯಾರಾದರೂ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಲಿ ಎಂದರು.
ಸಿಎಂ ಬದಲಾವಣೆ ಯಾವ ಉದ್ದೇಶಕ್ಕೆ ಆಯ್ತು ನನಗೆ ಗೊತ್ತಿಲ್ಲ. ಅನಂತಕುಮಾರ್ ಇದ್ದಿದ್ರೆ ಸಚಿವನಾಗುತ್ತಿದ್ದೆ ಎಂಬುದು ಎಲ್ಲರಿಗೂ ಗೊತ್ತಿದ್ದಿದ್ದೆ. ಪಕ್ಷ ನಿಷ್ಠೆ, ಹಿಂದುತ್ವಕ್ಕೆ ದಕ್ಷಿಣ ಕರ್ನಾಟಕದ ಶಾಸಕರನ್ನು ಗುರುತಿಸಿ ಸ್ಥಾನ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲೂ ಈ ರೀತಿ ಗುರುತಿಸುವ ಕೆಲಸ ಆಗಬೇಕು. 2004ರಿಂದ ಶಾಸಕನಾಗಿದ್ದು 90ರ ದಶಕದಿಂದಲೂ ಪಕ್ಷದಲ್ಲಿ ಇದ್ದೇನೆ. 2008ರ ನಂತರ ಬಂದವರಿಗೂ ಅಧಿಕಾರ ಸಿಕ್ಕಿದೆ. ಪರಿವಾರ ಹಿನ್ನೆಲೆ ಬಂದಂತಹ ಶಾಸಕರಿಗೆ ಸಭ್ಯತೆ ಸಂಸ್ಕಾರ ಕೊಟ್ಟಿದ್ದರಿಂದ ಇತಿಮಿತಿಯಲ್ಲಿರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದವರಿಗೆ ಸಚಿವ ಸ್ಥಾನ ನೀಡಿದ್ರೆ ಅನುಕೂಲ ಆಗ್ತಿತ್ತು. ಮುಂಬರುವ ಮಹಾನಗರ ಪಾಲಿಕೆ, ಜಿ.ಪಂ, ತಾ.ಪಂ. ಚುನಾವಣೆಯಲ್ಲಿ ಅನುಕೂಲ ಆಗುತ್ತಿತ್ತು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡ್ತೀನಿ ಅಂದ್ರೆ ನೂರಕ್ಕೆ ನೂರು ಒಪ್ಪಲ್ಲ. ನಾನು ಜಾತಿ ನೋಡಿ ಪಕ್ಷ ಸೇರಿಲ್ಲ, ನನ್ನ ಕೆಲಸ ಕಾರ್ಯ ನೋಡಿ ಗುರುತಿಸಬೇಕಾಗಿತ್ತು ಎಂದು ಶಾಸಕ ಅಭಯ್ ಪಾಟೀಲ್ ಹೇಳಿದರು.