ಬೆಳಗಾವಿ: ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರ ಸೇರಿ ಸಂಬಂಧಿಕರ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ, ವರನ ತಮ್ಮ ಭರಮಾ ಸೇರಿ ಐವರ ಮೇಲೆ ಹಲ್ಲೆ ಮಾಡಲಾಗಿದೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ವ್ಯಕ್ತಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ಧಾಮನೆ ಗ್ರಾಮದಲ್ಲಿ ಸೈಬಣ್ಣವರ್ ಕುಟುಂಬದ ಮದುವೆ ಸಮಾರಂಭವಿತ್ತು. ರಾತ್ರಿ ಬ್ಯಾಂಡ್ ಮೆರವಣಿಗೆ ಮೂಲಕ ವಧು-ವರನನ್ನು ಕುಟುಂಬಸ್ಥರು ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಕನ್ನಡ ಧ್ವಜ ಹಿಡಿದು 'ಕರುನಾಡೇ' ಹಾಡಿಗೆ ಯುವಕರು ಕುಣಿದು ಕುಪ್ಪಳಿಸುತ್ತಿದ್ದರು.
ಕನ್ನಡ ಧ್ಚಜ ಹಿಡಿದು ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಿದ್ದಕ್ಕೆ ಎಂಇಎಸ್ ಪುಂಡರು ಕಿರಿಕ್ ಮಾಡಿದ್ದಾರೆ. ಈ ಕುರಿತು ಅಜಯ್ ಯಳ್ಳೂರಕರ್, ಆಕಾಶ್ ಸೇರಿ 10 ಯುವಕರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಅಧಿವೇಶನ ವೇಳೆ ಬೈಕ್‌ಗೆ ಬೆಂಕಿ ಹಚ್ಚಿದ್ದ ಪುಂಡರು, ಕನ್ನಡ ಬೋರ್ಡ್ ಎದುರು ಮರಾಠಿ ಬೋರ್ಡ್ ಹಾಕಿಯೂ ಕಿರಿಕ್ ಮಾಡಿದ್ದರು. ರಾಣಿ ಚನ್ನಮ್ಮ ನಗರ ಎನ್ನುವ ಕೈಬರಹದ ಬೋರ್ಡ್ ಎದುರು ಧರ್ಮವೀರ ಸಂಭಾಜಿನಗರ ಎಂಬ ಬೋರ್ಡ್ ಹಾಕಿ ಎಂಇಎಸ್ ಪುಂಡರು ಉದ್ಧಟತನ ಮೆರೆದಿದ್ದರು.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಂಡ್ಯ: ಮಗುವನ್ನು ಚರ್ಚ್ನಲ್ಲಿ ಮಲಗಿಸಿ ಪೋಷಕರು ನಾಪತ್ತೆ