ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಜಿಲ್ಲಾಡಳಿತದ ಬೇಜವಾಬ್ದಾರಿಯೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು, ಧರ್ಮಸಭೆಯಲ್ಲಿ ಪಾಲ್ಗೊಂಡು ದೆಹಲಿಯಿಂದ ರೈಲಿನಲ್ಲಿ ಬಂದವರನ್ನು ಸಾಮೂಹಿಕವಾಗಿ ಕ್ವಾರಂಟೈನ್ ಮಾಡಲಾಗಿತ್ತು. ಸೋಂಕಿತರ ಸಂಪರ್ಕ ಹೊಂದಿದವರಿಂದ ಇತರರಿಗೂ ಸೋಂಕು ತಗುಲಿದೆ. ಅಧಿಕಾರಿಗಳ ಈ ಬೇಜವಾಬ್ದಾರಿಯೇ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 20 ವರ್ಷದ ಯುವಕ ದೆಹಲಿಯಿಂದ ಮರಳಿದ್ದನು. ಈತನ ಜತೆಗೆ ಬೆಳಗಾವಿ ತಹಶೀಲ್ದಾರ್ 35 ಜನರನ್ನು ಹಿರೇಬಾಗೇವಾಡಿಯ ಲಾಡ್ಜ್ನಲ್ಲಿ ಕ್ವಾರಂಟೈನ್ ಮಾಡಿದ್ದರು. ಆರಂಭದಲ್ಲಿ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಲಾಡ್ಜ್ನಲ್ಲಿದ್ದ 15 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಸೋಂಕು ಹೆಚ್ಚಾಗಲು ಸಾಮೂಹಿಕ ಕ್ವಾರಂಟೈನ್ ಕಾರಣ ಎನ್ನಲಾಗುತ್ತಿದೆ. ದೆಹಲಿಯಿಂದ ಆಗಮಿಸಿದ್ದ 149 ಹಾಗೂ 150 ನೇ ಸೋಂಕಿತ ಮಹಿಳೆಯರಿಂದ ಅನೇಕರಿಗೆ ಸೋಂಕು ತಗುಲಿದೆ. ಈ ಮಹಿಳೆಯರ ಜತೆಗೆ ಮೋರಾರ್ಜಿ ದೇಸಾಯಿ ಶಾಲೆಯಲ್ಲಿ 45 ಮಹಿಳೆಯರನ್ನು ಕ್ವಾರಂಟೈನ್ ಮಾಡಲಾಗಿತ್ತು. ಸಾಮೂಹಿಕ ಕ್ವಾರಂಟೈನ್‍ನಿಂದಲೇ ರಾಯಭಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಎನ್ನಲಾಗುತ್ತಿದೆ.
ಮರುಪರೀಕ್ಷೆಯಲ್ಲಿ ಸೋಂಕು ದೃಢ:
ಇಂದು ಒಂದೇ ದಿನಕ್ಕೆ 17 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇಲ್ಲಿನ ಜನರನ್ನು ಬೆಚ್ಚಿಬೀಳಿಸಿದೆ. ಆರಂಭದಲ್ಲಿ ನೆಗಟಿವ್ ಬಂದಿದ್ದ ಐವರಲ್ಲಿ ಕೆಮ್ಮು, ಜ್ವರ ಕಾಣಿಸಿಕೊಂಡ ಕಾರಣ ರಕ್ತಮಾದರಿಯನ್ನು ಮತ್ತೊಮ್ಮೆ ತಪಾಸಣೆಗೆ ಕಳಿಸಲಾಗಿತ್ತು. ಇಂದು ಈ ಐವರ ವರದಿ ಬಂದಿದ್ದು, ಕೊರೊನಾ ಸೋಂಕು ದೃಢವಾಗಿದೆ. ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು ಬಂದಿದ್ದ ಐವರನ್ನು ಬೆಳಗಾವಿ ಜಿಲ್ಲಾಡಳಿತ ಪತ್ತೆ ಹೆಚ್ಚಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿತ್ತು. ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ ಮೂವರು, ಬೆಳಗಾವಿ ಹಾಗೂ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ತಲಾ ಓರ್ವನಲ್ಲಿ ಮರು ಪರೀಕ್ಷೆಯಿಂದ ಸೋಂಕು ದೃಢವಾಗಿದೆ.