ಬೆಳಗಾವಿ :ಯಾವುದೇ ಕಾರಣಕ್ಕೂ ಸಚಿವ ಈಶ್ವರಪ್ಪನವರು ರಾಜೀನಾಮೆ ಕೊಡಬಾರದು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ನಗರದಲ್ಲಿ ಸಚಿವ ಈಶ್ವರಪ್ಪ ಮೇಲೆ ಬಂದಿರೋ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರು ಈಶ್ವರಪ್ಪ ಅವರ ಮೇಲೆ ಮಾಡುತ್ತಿರೋ ಆರೋಪ ಸತ್ಯಕ್ಕೆ ದೂರವಾದದ್ದು. ಟೆಂಡರ್‌ಗೆ ಅದರದೇ ಆದ ಪ್ರಕ್ರಿಯೆ ಇದೆ. ಜಾಹೀರಾತು ನೀಡುವುದು, ಸರಕಾರ ಆದೇಶ ಮಾಡುವುದು, ಹೀಗೆ ಹಲವು ಪ್ರಕ್ರಿಯೆಗಳಿವೆ. ಈ ಕೇಸ್‌ನಲ್ಲಿ ಇದ್ಯಾವುದೂ ನಡೆದೇ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನವರು ಈಶ್ವರಪ್ಪನವರ ಮೇಲೆ ಮಾಡುತ್ತಿರೋ ಆಪಾದನೆ ರಾಜಕೀಯ ಪ್ರೇರಿತವಾಗಿದೆ. ಯಾವುದೇ ಕಾರಣಕ್ಕೂ ಈಶ್ವರಪ್ಪನವರು ರಾಜೀನಾಮೆ ಕೊಡಬಾರದು. ಸಚಿವ ಈಶ್ವರಪ್ಪ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದೆ ಆಪಾದನೆ ಮಾಡುವುದು ಸರಿಯಲ್ಲ. ಯಾರೋ ಒಬ್ಬರು ಬಂದು ಆಪಾದನೆ ಮಾಡಿದ ತಕ್ಷಣ ಈ ರೀತಿ ಸಂಬಂಧ ಕಲ್ಪಿಸುವುದು ಸರಿಯಲ್ಲ. ಸಂತೋಷ್ ನಮ್ಮ ಕಾರ್ಯಕರ್ತ ಇರಬಹುದು, ಸಾಕಷ್ಟು ಜನ ಇರ್ತಾರೆ. ಆದರೆ, ಇಷ್ಟು ಹಣ ಕೊಡೋದಿತ್ತು ಅಂತಾ ಅನ್ನೋದು ಸರಿಯಲ್ಲ ಎಂದು ಹೇಳಿದ್ದಾರೆ.