ಬೆಳಗಾವಿ : ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಗುತ್ತಿಲ್ಲ. ಹೀಗಾಗಿ ಆರೋಪ ಮಾಡೋದು ಅವರ ಕೆಲಸವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರಿಗೆ ಬುದ್ಧಿ ಭ್ರಮಣೆ ಆಗಿದೆ. ವದಂತಿ ಹಬ್ಬಿಸೋದು ಅವರ ಕೆಲಸ ಆಗಿದೆ. 40ಪರ್ಸೆಂಟ್ ಕಮಿಷನ್ ಅಂತ ಎಲ್ಲರೂ ಆರೋಪ ಮಾಡುತ್ತಾರೆ. ಒಂದು ಕೇಸ್ ಇದ್ದರೆ ಕಾನೂನು ಕ್ರಮ ವಹಿಸುವ ಬಗ್ಗೆ ಹೇಳಿದ್ದೇವೆ. ಇವತ್ತಿನವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ ಎಂದರು.
ಕಾಂಗ್ರೆಸ್ ಪ್ರೇರಣೆಯಿಂದಲೇ ಕಮಿಷನ್ ಆರೋಪ ಮಾಡಿದ್ದರು. ಟೆಂಡರ್ ಪರಿಶೀಲನೆಗೆ ಓರ್ವ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ಅಂತಹ ಕೆಲಸ ಕಾಂಗ್ರೆಸ್ ಅಧಿಕಾರದಲ್ಲಿ ಯಾವತ್ತೂ ಮಾಡಲಿಲ್ಲ. ಲೋಕಾಯುಕ್ತ ಮೊಟಕುಗೊಳಿಸಿ ಎಸಿಬಿ ತಂದು ಭ್ರಷ್ಟಾಚಾರ ಮುಚ್ಚಿ ಹಾಕಿದರು. ಪದೇ ಪದೇ ಸಿದ್ದರಾಮಯ್ಯ ತಾವು ಅಹಿಂದ ನಾಯಕ ಎನ್ನುತ್ತಾರೆ. ದೇಶದಲ್ಲಿ ಪ್ರಧಾನಿ ಮೋದಿ ಅವರಿಗಿಂತ ಅಹಿಂದ ನಾಯಕ ಯಾರೂ ಇಲ್ಲ. ಹಿಂದುಳಿದ, ಸಣ್ಣ ಸಮುದಾಯದ ನಾಯಕ ಮೋದಿ ಎಂದು ಸಚಿವ ಕಾರಜೋಳ ಬಣ್ಣಿಸಿದರು.
ಜನತಾ ಪರಿವಾರದಿಂದ ಬಂದ ಬೊಮ್ಮಾಯಿ ಅವರನ್ನು ಬಿಜೆಪಿ ಒಪ್ಪಿಕೊಳ್ಳುತ್ತಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ, ಸಿದ್ದರಾಮಯ್ಯ ಕಾಂಗ್ರೆಸ್ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಒಪ್ಪದೇ ಇದ್ದರೇ ಸಿಎಂ ಮಾಡುತ್ತಿದ್ರಾ?. ಬೊಮ್ಮಾಯಿ ಬುದ್ಧಿವಂತ, ಜ್ಞಾನಿ, ಸಮರ್ಥ ಆಡಳಿತ ನಡೆಸುತ್ತಾರೆ ಅಂತಲೇ ಅವರನ್ನು ಸಿಎಂ ಮಾಡಿದ್ದಾರೆ ಎಂದರು.