ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಓರಿಜಿನಲ್ ಕಾಂಗ್ರೆಸ್, ಓರಿಜಿನಲ್ ಬಿಜೆಪಿ ಇಲ್ಲ. ಜನತಾ ಪರಿವಾರದ ಕಾಂಗ್ರೆಸ್. ಜನತಾ ಪರಿವಾರದ ಬಿಜೆಪಿ ಇದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎರಡು ರಾಷ್ಟ್ರೀಯ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಮುಖ್ಯಮಂತ್ರಿ ಜನತಾ ಪರಿವಾರದವರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಜನತಾ ಪರಿವಾರದವರು. ಈ ರಾಜ್ಯದಲ್ಲಿ ಮೂಲ ಕಾಂಗ್ರೆಸ್, ಮೂಲ ಬಿಜೆಪಿ ಯಾವಾಗಲೋ ಹೋಗಿದೆ ಎಂದರು.
ಇಲ್ಲಿ ಜನತಾ ಪರಿವಾರದ ಬಿಜೆಪಿ. ಜನತಾ ಪರಿವಾರದ ಕಾಂಗ್ರೆಸ್ ಇದೆ. ಅವರಿಗೆ ಕೃತಜ್ಞತೆ ಇದೆಯಾ?. ಇವತ್ತು ರಾಜ್ಯದಲ್ಲಿ ಯಾರಿಗೂ ಕೃತಜ್ಞತೆ ಅನ್ನೋದಾಗಲಿ, ನಾವು ಒಂದು ಪಕ್ಷದಿಂದ ಬೆಳೆದಿದ್ದೇವೆ ಆ ಪಕ್ಷಕ್ಕೆ ಅನ್ಯಾಯ ಆಗಬಾರದೆಂಬುದಾಗಲಿ ಇಲ್ಲ. ಹಿಂದೆ ಇದ್ದಂತ ಪಕ್ಷ ನಿಷ್ಠೆಯ ವಾತಾವರಣ ಇಂದು ಯಾವುದೇ ಪಕ್ಷದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಸರ್ಕಾರ ಬಂದ್ರೆ 10ಕೆಜಿ ಅಕ್ಕಿ ನೀಡುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ, 10ಕೆಜಿ ಅಕ್ಕಿ ಪ್ರತೀ ವರ್ಷ ನೀಡುತ್ತೇನೆ ಅಂತಾ ಹೇಳುವುದು, ಸ್ವಾತಂತ್ರ ಬಂದ 75 ವರ್ಷಗಳ ನಂತರವೂ ನಾಡಿನ ಜನತೆ ಸರ್ಕಾರ ಕೊಡುವ ಉಚಿತ ಕಾರ್ಯಕ್ರಮಗಳಿಗೆ ಭಿಕ್ಷುಕರಂತೆ ಕ್ಯೂ ನಿಲ್ಲುವಂತಹ ವ್ಯವಸ್ಥೆ ತೊಲಗಬೇಕು. ಇನ್ನೊಬ್ಬರಿಗೆ ನೆರವು ನೀಡುವ ಆರ್ಥಿಕ ಶಕ್ತಿಯನ್ನು ಈ ನಾಡಿನ ಪ್ರತಿಯೊಬ್ಬರು ಪಡೆಯಬೇಕೆಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಪಂಚರತ್ನ ರಥಯಾತ್ರೆ ಪ್ರಾರಂಭ : ಮುಂಬೈ ಕರ್ನಾಟಕದಲ್ಲಿ ಜೆಡಿಎಸ್ ಸಂಘಟನೆ ಕ್ಷೀಣಿಸಿದ್ದು ನಿಜ. ಎರಡು ವರ್ಷ ಕೋವಿಡ್ ಅನಾಹುತದಿಂದ ನನಗೆ ಬರೋದಕ್ಕೆ ಆಗಲಿಲ್ಲ. ಬೈಲಹೊಂಗಲದಲ್ಲಿ ಜನತಾ ಜಲಧಾರೆ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿದ್ದೇವೆ. ಆಗಸ್ಟ್‌ನಲ್ಲಿ ಜೆಡಿಎಸ್ ವತಿಯಿಂದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಪ್ರಾರಂಭ ಮಾಡುತ್ತಿದ್ದೇವೆ. ಮೂರು ತಿಂಗಳ ಕಾಲ ಮುಂಬೈ ಕರ್ನಾಟಕದಲ್ಲಿ ನಿರಂತರ ರಥಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಪಕ್ಷ ಸಂಘಟನೆ ಕೊರತೆ ನೀಗಿಸಲು ನಾನೇ ಭಾಗವಹಿಸುತ್ತಿದ್ದೇನೆ. ಈ ವೇಳೆ ಹಳ್ಳಿಗಳಲ್ಲೇ ವಾಸ್ತವ್ಯ ಹೂಡುತ್ತೇನೆ. ಇದಕ್ಕೆ ರೂಪರೇಷೆ ತಯಾರು ಮಾಡುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಈ ಭಾಗದಲ್ಲೂ ಪಕ್ಷ ಸಂಘಟನೆಗೆ ಅನುಕೂಲ ಆಗುತ್ತದೆ ಎಂದರು.
ಇಂದು ಜೆಡಿಎಸ್ ಪರ ಜನ ತೀರ್ಮಾನ ಮಾಡುವ ವಾತಾವರಣವಿದೆ. ಮೂರನೇ ಶಕ್ತಿಯಾಗಿ ಪ್ರಾದೇಶಿಕ ನೆಲಗಟ್ಟಿನಲ್ಲಿ ಕನ್ನಡಿಗರೇ ರಾಜ್ಯ ಆಳುವಂತ ಸರ್ಕಾರ ತರುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತೇನೆ. 2023ರಲ್ಲಿ ರಾಜ್ಯದಲ್ಲಿ ಹೊಸ ಪರ್ವ ಆರಂಭವಾಗಲಿದ್ದು, 2023ರಲ್ಲಿ ನಾಡಿನ ಜನತೆ ಆಶೀರ್ವದಿಸಿದ್ರೆ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ನೀರಾವರಿ ಯೋಜನೆಗಳನ್ನು ಐದು ವರ್ಷಗಳಲ್ಲಿ ಸಂಪೂರ್ಣ ಅನುಷ್ಠಾನಗೊಳಿಸುತ್ತೇನೆ ಎಂದು ಭರವಸೆ ನೀಡಿದರು.