ಅಥಣಿ(ಬೆಳಗಾವಿ): ಲಾಕ್ಡೌನ್ ಹಿನ್ನೆಲೆ ಅಥಣಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಾಯಬಾಗ ತಾಲೂಕಿನ ಪರಮನಂದವಾಡಿ ಗ್ರಾಮದ 28 ಕುಟುಂಬಗಳಿಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಧನಸಹಾಯ ಮಾಡಿ ನೊಂದವರ ಸಹಾಯಕ್ಕೆ ಮುಂದಾಗಿದ್ದಾರೆ.
'ಲಾಕ್ಡೌನ್ ಎಫೆಕ್ಟ್: ಆಹಾರವಿಲ್ಲದೆ ಪರಾಡುತ್ತಿವೆ 28 ಕುಟುಂಬಗಳು' ಎಂಬ ಶೀರ್ಷಿಕೆ ಅಡಿಯಲ್ಲಿ 'ಈಟಿವಿ ಭಾರತ' ನಲ್ಲಿ ವರದಿ ಬಿತ್ತರಿಸಿ ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಸಕ ಮಹೇಶ್ ಕುಮಟಳ್ಳಿ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂಬ ಭರವಸೆ ನೀಡಿದ್ದರು. ಅದರಂತೆ ಕೇವಲ ಎರಡ್ಮೂರು ಗಂಟೆಗಳಲ್ಲೇ ಶಾಸಕರು ಸ್ಥಳಕ್ಕೆ ತೆರಳಿ ಬಡಪಾಯಿಗಳಿಗೆ ನೆರವಾಗಿದ್ದಾರೆ.
ವರದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಅವರು, ತಾಲೂಕು ಆಡಳಿತದ ಜೊತೆಗೂಡಿ ಹಲ್ಯಾಳ ಗ್ರಾಮದ ಹನುಮಾನ್ ನಗರದಲ್ಲಿ ವಾಸವಿದ್ದ ಕುಟುಂಬಸ್ಥರ ಕಷ್ಟಗಳನ್ನು ಆಲಿಸಿದರು.
ಲಾಕ್ಡೌನ್ ಎಫೆಕ್ಟ್: ಆಹಾರವಿಲ್ಲದೆ ಪರಾಡುತ್ತಿವೆ 28 ಕುಟುಂಬಗಳು
ಅಷ್ಟೇ ಅಲ್ಲದೆ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ರವಿ ಬಂಗಾರಪ್ಪ ಅವರಿಗೆ ಆಹಾರ ಪದಾರ್ಥಗಳ ಕಿಟ್ ನೀಡುವಂತೆ ಹಾಗೂ ದನಕರುಗಳಿಗೆ ಮೇವು ವಿತರಿಸಿ ಎಂದು ಸೂಚಿಸಿದರು. ಪ್ರತಿಯೊಂದು ಕುಟುಂಬಗಳಿಗೆ ದಿನಸಿ ಪದಾರ್ಥ ಖರೀದಿಗೆ ಐದು ಸಾವಿರ ಹಣವನ್ನು ನೀಡಿ ಶಾಸಕ ಮಾನವೀಯತೆ ಮೆರೆದಿದ್ದಾರೆ.
ಈಟಿವಿ ಭಾರತ ವರದಿ ಇಂಪ್ಯಾಕ್ಟ್... ಬಡಪಾಯಿಗಳ ಸಂಕಷ್ಟಕ್ಕೆ ಕೆಲ ಗಂಟೆಗಳಲ್ಲೇ ನೆರವು ನೀಡಿದ್ರು ಶಾಸಕ ಮಹೇಶ್ ಕುಮಟಳ್ಳಿ ಇನ್ನು, ತಮ್ಮ ಸಂಕಷ್ಟ ಕುರಿತು ಶಾಸಕರ ಗಮನ ಸೆಳೆದ ಈಟಿವಿ ಭಾರತ ಮತ್ತು ಕಷ್ಟ ಕಾಲಕ್ಕೆ ತುರ್ತಾಗಿ ಸ್ಪಂದಿಸಿದ ಶಾಸಕ ಮಹೇಶ್ ಕುಮಟಳ್ಳಿ ಅವರಿಗೂ 28 ಕುಟುಂಬಗಳ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಯಾರು ನಮ್ಮ ಕಡೆ ತಿರುಗಿಯೂ ನೋಡಿರಲಿಲ್ಲ. ಆದರೆ ಇವತ್ತು ಈಟಿವಿ ಭಾರತ ನಮ್ಮ ಕಷ್ಟಕಾಲದಲ್ಲಿ ಆಸರೆ ಆಯ್ತು ಎಂದು ಬಡಪಾಯಿಗಳು ಆನಂದಭಾಷ್ಪ ಸುರಿಸಿದರು.
ಒಟ್ಟಾರೆ ಈಟಿವಿ ಭಾರತ್ ವರದಿಗೆ ಸ್ಪಂದಿಸಿ 28 ಕುಟುಂಬಗಳಿಗೆ ನೆರವಾಗಿರುವ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರ ಸೇವೆ ಇತರರಿಗೂ ದೊರೆಯಲಿ ಎಂದು ಆಶಿಸುತ್ತೇವೆ.