ಬೆಳಗಾವಿ/ರಾಮನಗರ :ಮಾಜಿ ಸಚಿವ ಡಿ.ಕೆ ಶಿವಕುಮಾರ್ಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಿರುಕುಳ ನೀಡುವುದನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಳಗಾವಿ ನಗರದ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಐಟಿ ಮತ್ತು ಇಡಿ ಸಂಸ್ಥೆಗಳು ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಡಿ.ಕೆ ಶಿವಕುಮಾರ್ ವಿರುದ್ಧ ರಾಜಕೀಯ ಪ್ರೇರಿತ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ರಾಮನಗರದಲ್ಲೂ ಪ್ರತಿಭಟನೆ...
ಇನ್ನು ಡಿ.ಕೆ. ಶಿವಕುಮಾರ್ ಸ್ವಂತ ಊರು ರಾಮನಗರ ಜಿಲ್ಲೆ ಕನಕಪುರ ತಾಲೂಕು ದೊಡ್ಡ ಆಲಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು ಕನಕಪುರ - ಸಂಗಮ ಮುಖ್ಯ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಅಮಿತ್ ಷಾ ಹಾಗೂ ಮೋದಿ ಭಾವಚಿತ್ರಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರು ಪ್ರತಿಕಾರದ ರಾಜಕೀಯವನ್ನು ಮಾಡುತ್ತಿದ್ದಾರೆ. ಅವರಿಗೆ ವಿರೋಧ ಪಕ್ಷ ಇರೋದೆ ಇಷ್ಟವಿಲ್ಲದಂತಾಗಿದೆ. ವಿರೋಧ ಪಕ್ಷಗಳಲ್ಲಿ ಯಾರು ಬಲಿಷ್ಠರಾಗಿದ್ದಾರೋ ಅವರೆಲ್ಲರನ್ನೂ ಮುಗಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಅಮಿತ್ ಷಾ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ ಎಂಬ ಕಾರಣಕ್ಕೆ ಐಟಿ, ಇಡಿ ಬಳಸಿಕೊಂಡು ಡಿಕೆಶಿ ಕುಟುಂಬಕ್ಕೆ ಕಿರುಕುಳ ನೀಡ್ತಿದ್ದಾರೆ. ಇದು ದ್ವೇಷ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ. ಆದ್ದರಿಂದ ಕೂಡಲೇ ಡಿಕೆಶಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಕೇವಲ ಡಿ.ಕೆ. ಶಿವಕುಮಾರ್ ಕುಟುಂಬದ ಮೇಲಷ್ಟೇ ಅಲ್ಲ, ಎಲ್ಲಾ ರಾಜಕೀಯ ಮುಖಂಡರ ಮೇಲೂ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.