ಕರ್ನಾಟಕ

karnataka

By

Published : Dec 13, 2021, 3:57 PM IST

ETV Bharat / city

ನಕಲಿ ಅಂಕ ಪಟ್ಟಿ ಪ್ರಕರಣದಲ್ಲಿ ಬೆಂಗಳೂರು ವಿವಿ ವಿರುದ್ಧ ಕ್ರಮವಿಲ್ಲ: ಸಚಿವ ಅಶ್ವತ್ಥನಾರಾಯಣ

ನಕಲಿ ಅಂಕಪಟ್ಟಿ ಕುರಿತು ಮೂರು ಪ್ರಕರಣಗಳು ಪತ್ತೆಯಾವಗಿವೆ. ಆದರೆ, ಇದು ಬೆಂಗಳೂರು ವಿವಿಯಲ್ಲಿ ಆಗಿಲ್ಲ, ಹೊರಗೆ ಖಾಸಗಿಯಲ್ಲಿ ನೇಮಕಾತಿ ವೇಳೆ ಅಂಕಪಟ್ಟಿ ನಕಲಿ ಮಾಡಲಾಗಿದೆ. ಸಂಬಂಧಪಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಪರಿಷತ್‌ಗೆ ಹೇಳಿದ್ದಾರೆ.

duplicate marks card case; no action against bangalore vv: Minister ashwath narayan
ನಕಲಿ ಅಂಕ ಪಟ್ಟಿ ಪ್ರಕರಣದಲ್ಲಿ ಬೆಂಗಳೂರು ವಿವಿ ವಿರುದ್ಧ ಕ್ರಮವಿಲ್ಲ: ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಯಾವುದೇ ರೀತಿಯಲ್ಲಿ ನಕಲಿ ಅಂಕಪಟ್ಟಿ, ನಕಲಿ ಪದವಿ ಪ್ರದಾನ ಮಾಡಿಲ್ಲ. ಹಾಗಾಗಿ ವಿವಿ ಅಧಿಕಾರಿಗಳ ವಿರುದ್ಧ ನಕಲಿ ಅಂಕಪಟ್ಟಿ ಪ್ರಕರಣ ಸಂಬಂಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಪ್ರಶ್ನೆ ಇಲ್ಲ. ಆದರೆ ನಕಲಿ ಅಂಕಪಟ್ಟಿ ನೀಡಿ ಹುದ್ದೆ ಗಿಟ್ಟಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಪರಿಷತ್‌ನಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಕಲಿ ಅಂಕಪಟ್ಟಿ ಕುರಿತು ಮೂರು ಪ್ರಕರಣಗಳು ಪತ್ತೆಯಾವಗಿವೆ. ಅವು ವಿವಿಯಲ್ಲಿ ಆಗಿಲ್ಲ, ಹೊರಗೆ ಖಾಸಗಿಯಲ್ಲಿ ನೇಮಕಾತಿ ವೇಳೆ ಅಂಕಪಟ್ಟಿ ನಕಲಿ ಮಾಡಲಾಗಿದೆ. ವಿಶ್ವವಿದ್ಯಾಲಯದ ಪರಿಶೀಲನೆಗೆ ಕಳಿಸಿದಾಗ ಬೆಳಕಿಗೆ ಬಂದಿದೆ. ಪತ್ತೆಯಾಗುತ್ತಿದ್ದಂತೆ ದೂರು ದಾಖಲಿಸಿದ್ದು, ತನಿಖೆ ನಡೆಯಿತ್ತಿದೆ. ಸಂಬಂಧಪಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಡಿಜಿ ಲಾಕರ್ ಮೂಲಕ ದಾಖಲಾತಿ ಪರಿಶೀಲನೆ
ಮುಂದಿನ ದಿನದಲ್ಲಿ ಇಂತಹ ಸಮಸ್ಯೆ ಆಗದ ರೀತಿ ನೋಡಲು ಡಿಜಿಟಲೈಸೇಷನ್ ಆಫ್ ಆಲ್ ಡಾಕ್ಟುಮೆಂಟ್ಸ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಡಿಜಿ ಲಾಕರ್ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ದಾಖಲಾತಿ ಪರಿಶೀಲನೆ ಮಾಡಬಹುದಾಗಿದೆ. ಇನ್ಮುಂದೆ ಕಳೆದ 43 ವರ್ಷದ ದಾಖಲಾತಿ ಡಿಜಿಟಲೈಸ್ ಮಾಡಲಾಗುತ್ತದೆ, ಯಾವ ವ್ಯಕ್ತಿಯ ದಾಖಲೆ ವಿವಿ ಕೊಟ್ಟಿದ್ದರೆ ಅದು ಡಿಜಿಟಲೈಸ್ ಆಗಲಿದೆ ಎಂದು ವಿವರಿಸಿದರು.

ವಿವಿ ಕೊಟ್ಟಿರುವ ಅಂಕಪಟ್ಟಿ ನಕಲಿ ಅಲ್ಲ, ಮೂರು ವ್ಯಕ್ತಿಗಳ ಅಂಕಪಟ್ಟಿ ಪರಿಶೀಲನೆಗೆ ವಿವಿಗೆ ಬಂದಾಗ ಅಂಕ ಪಟ್ಟಿ ನಕಲು ಮಾಡಿರುವುದು ಬಹಿರಂಗವಾಗಿದೆ. ಇದು ವಿವಿ ಕೊಟ್ಟಿಲ್ಲ, ಇದು ಹೊರಗೆ ಆಗಿರೋದು. ಹಾಗಾಗಿ ವಿವಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳವುದಿಲ್ಲ. ನಕಲಿ ಮಾಡಿ ಉದ್ಯೋಗ ಪಡೆದುಕೊಂಡವರ ವಿರುದ್ದ ಕ್ರಮ ಆಗಬೇಕು, ಯಾರು ನಕಲಿ ಅಂಕಪಟ್ಟಿ ನೀಡಿ ನೌಕರರು ಆಗಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಶಾಸಕ, ಸಚಿವರಂದಲೇ ನಕಲಿ ಅಂಕ ಪಟ್ಟಿ:
ಸರ್ಕಾರ ವಿವಿ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದಕ್ಕೆ ಕಿಡಿಕಾರದ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್, ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ. ಶಾಸಕರು, ಸಚಿವರು, ಕೇಂದ್ರ ಸಚಿವರು ಕೂಡ ನಕಲಿ ಅಂಕಪಟ್ಟಿ ಪಡೆದಿದ್ದಾರೆ. ಬೇಕಾದರೆ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಸದನಕ್ಕೆ ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥನಾರಾಯಣ, ಪಟ್ಟಿ ಇದ್ದರೆ ಹೇಳಬಹುದು ಎಂದು ಹರಿಪ್ರಸಾದ್ ಕಾಲೆಳೆದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಹೊರಟ್ಟಿ, ಸದನದ ಹೊರಗೆ ಇದ್ದ ನಕಲಿ ಅಂಕಪಟ್ಟಿ ವಿವಾದ ಈಗ ಸದನದ ಒಳಗೂ ಬಂದ್ಬಿಡ್ತಾ ಎಂದು ಹಾಸ್ಯ ಚಟಾಕಿ ಹಾರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ 10 ವರ್ಷದ ಟಾರ್ಗೆಟ್:
ಸಮಾಜದಲ್ಲಿ ಸಮಾನತೆ ಕೊಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ನ್ಯೂನತೆ ಸರಿಪಡಿಸುವ ಎಲ್ಲ ವ್ಯವಸ್ಥೆಯನ್ನು ನೂತನ ಶಿಕ್ಷಣ ನೀತಿಯಲ್ಲಿ ಮಾಡಲಾಗುತ್ತದೆ, ಇದಕ್ಕಾಗಿ 10 ವರ್ಷದ ಟಾರ್ಗೆಟ್‌ನೊಂದಿಗೆ ಅಗತ್ಯ ಅನುದಾನ ಪಡೆದುಕೊಂಡು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಂಗ್ರೆಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು 10 ವರ್ಷದ ಗುರಿ ಇರಿಸಿಕೊಂಡು ಅನುಷ್ಠಾನಕ್ಕೆ ತರಲಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಶೇ.100 ರಷ್ಟು ದಾಖಲಾತಿ, ಕಲಿಕೆಯಲ್ಲಿ ಗುಣಮಟ್ಟ ತರಲಾಗುತ್ತದೆ.

ಇಂದಿನ ಕಲಿಕೆಯಲ್ಲಿ ಅಷ್ಟು ಸುಧಾರಣೆ ಆಗಿಲ್ಲ, ಉತ್ತಮ ಕಲಿಕ ಆಗುತ್ತಿಲ್ಲ, ಸುಧಾರಣೆ ತರಬೇಕು ಎಂದೇ ಬಹಳ ವರ್ಷದ ಬೇಡಿಕೆ ಇತ್ತು. 6ನೇ ವರ್ಷಕ್ಕೆ ಮಕ್ಕಳನ್ನು ಶಾಲೆಗೆ ಸೇರಲಾಗುತ್ತಿದೆ. ಅದರ ಬದಲು 3ನೇ ವರ್ಷಕ್ಕೆ ಸೇರಿಸುವಂತಾಗಬೇಕು, ಅದಕ್ಕಾಗಿ ಸುಧಾರಣೆ ತರಲಾಗುತ್ತಿದೆ.

ಖಾಸಗಿ ಶಾಲೆಗಳಲ್ಲಿ ಪ್ರೀ ನರ್ಸಿರಿ ವ್ಯವಸ್ಥೆ ಇದೆ. ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳು ಇದರಿಂದ ವಂಚಿತರಾಗಿದ್ದರು, ಅವರಿಗೆ ಈಗ ಅವಕಾಶ ಮಾಡಲಾಗುತ್ತಿದೆ. ನೂತನ ನೀತಿ ಅನುಷ್ಠಾನ ಕಾರ್ಯಪಡೆಯನ್ನು ಕೂಡ ರಚಿಸಲಾಗಿದೆ. ಇದರಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ, ಕೇವಕ ಶಿಕ್ಷಣ ಅಲ್ಲ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ.

ಸರ್ಕಾರದಿಂದ ಎಲ್ಲಾ ಹುದ್ದೆ ಭರ್ತಿಗೂ ಆಹ್ವಾನ ಮಾಡಲಾಗಿದೆ, ಸಮಾಜದಲ್ಲಿ ಸಮಾನತೆ ಕೊಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ನ್ಯೂನತೆ ಸರಿಪಡಿಸುವ ಎಲ್ಲ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಪ್ರಾರ್ಥನಾ ಮಂದಿರಗಳ ವಿದ್ಯುತ್ ಬಿಲ್ ಬಾಕಿ ಮನ್ನಾ ಇಲ್ಲ:
ರಾಜ್ಯದಲ್ಲಿರುವ ಯಾವುದೇ ಧರ್ಮದ, ಯಾವುದೇ ಪ್ರಾರ್ಥನಾ ಮಂದಿರದ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ರಾಜ್ಯದಲ್ಲಿರುವ ದೇವಸ್ಥಾನ, ಮಸೀದಿ,‌ ಚರ್ಚ್‌ಗಳ ಅಂಕಿ ಅಂಶವನ್ನು ಒದಗಿಸಿ ವಿದ್ಯುತ್ ಬಿಲ್ ಬಾಕಿ ಇರುವ ವಿವರ ನೀಡಿದರು.

ಎಲ್ಲಾ ಧರ್ಮಗಳ ಹಲವು ಪ್ರಾರ್ಥನಾ ಮಂದಿರದ ವಿದ್ಯುತ್ ಬಾಕಿ ಇದೆ. ಆದರೆ, ಬಾಕಿ ಬಿಲ್ ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಇಲಾಖೆಯೂ ನಡೆಯಬೇಕು ಹಾಗಾಗಿ ಮನ್ನಾ ಮಾಡಲ್ಲ. ಆದರೆ ಯಾವುದೇ ಪ್ರಾರ್ಥನಾ ಮಂದಿರ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರೆ ಕಡಿತ ಮಾಡುವ ಭರವಸೆ ನೀಡಿದರು‌.

ಇದನ್ನೂ ಓದಿ:ಶಿಕ್ಷಣ ಇಲಾಖೆ ಖಾಲಿ ಹುದ್ದೆ ಭರ್ತಿ ವಿಚಾರ.. ಸರ್ಕಾರದ ಉತ್ತರ ಪೆಂಡಿಂಗ್ ಇರಿಸಿ ರೂಲಿಂಗ್ ನೀಡಿದ ಸಭಾಪತಿ

ABOUT THE AUTHOR

...view details