ಬೆಳಗಾವಿ :ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಆಗುತ್ತೋ, ವಿಸ್ತರಣೆ ಆಗುತ್ತೋ ಗೊತ್ತಿಲ್ಲ. ಆದರೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಸಚಿವರು ಆಗುವ ಸಂದರ್ಭದಲ್ಲಿ ಅದನ್ನು ಮಣ್ಣು ಮಾಡಿದವರು ಯಡಿಯೂರಪ್ಪನವರು ಮತ್ತು ಅವರ ಮಗ ವಿಜಯೇಂದ್ರ ಎಂದು ದೂರಿದ್ದಾರೆ.
ಸಮ್ಮಿಶ್ರ ಸರ್ಕಾರದ ಪತನವಾದ ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಇದಾದ ಬಳಿಕ ನಮ್ಮನ್ನು ಎಂಎಲ್‌ಸಿ ಮಾಡುವಾಗ ನಮಗೆ ಅನ್ಯಾಯವಾಗಿದೆ. ಅಸೆಂಬ್ಲಿಯಿಂದ ಆಯ್ಕೆಯಾಗಿ ನಾನು ಕೌನ್ಸಿಲ್‌ಗೆ ಬರಬೇಕಾಗಿತ್ತು. ಅದನ್ನು ತಪ್ಪಿಸಿ ನಮ್ಮನ್ನು ನಾಮ ನಿರ್ದೇಶನ ಮಾಡಿದರು. ನಾಮಿನೆಟ್ ಸದಸ್ಯರಿಗೆ ಮಂತ್ರಿಯಾಗುವ ಯೋಗವಿಲ್ಲ. ಸುಪ್ರೀಂಕೋರ್ಟ್ ತೂಗುಗತ್ತಿ ಇದೆ. ಅದು ಗೊತ್ತಿದ್ದು, ನಮಗೆ ಈ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
2023ರ ನಂತರ ನಮಗೆ ಶಾಪ ವಿಮೋಚನೆ ಆಗುತ್ತೆ. ಈ ಕಾರಣಕ್ಕೆ ಸದ್ಯ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸರ್ಕಾರದ ಜತೆಗೆ ಕೆಲಸ ಮಾಡುತ್ತೇನೆ. ನಾನು ಸಚಿವ ಸ್ಥಾನ ನೀಡುವಂತೆ ಯಾರಿಗೂ ಸಪೋರ್ಟ್ ಮಾಡಲ್ಲ. ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರು. ಬಿಜೆಪಿ ಸರ್ಕಾರ ಸ್ಥಾಪನೆಗೆ ಅವರು ಕೂಡ ಪ್ರಮುಖ ಕಾರಣರಾದವರು.
ಹೈಕಮಾಂಡ್ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತೆ ನೋಡೋಣ. ಇಂದಿನ ರಾಜಕಾರಣದಲ್ಲಿ ಕೃತಜ್ಞತೆ ಪದಕ್ಕೆ ಅರ್ಥ ಇಲ್ಲದಂತಾಗಿದೆ. ಕೃತಜ್ಞತೆ ಇಲ್ಲದ ಜನನಾಯಕರಾಗುತ್ತಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಸೇರಿ ದುಡಿಯುವುದಾಗಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈತಪ್ಪುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ರಮೇಶ ಜಾರಕಿಹೊಳಿ ಸಚಿವ ಸ್ಥಾನ ತಪ್ಪಲು ಕಾಣುವ ಕೈಗಳೇ ಕಾರಣ. ರಮೇಶ್ ಜಾರಕಿಹೊಳಿಯನ್ನೂ ನಮ್ಮನ್ನೂ ಕಾಣುವ ಕೈಗಳೇ ಮುಗಿಸುತ್ತವೆ. ಸಿದ್ರಾಮಯ್ಯ, ನಾವು, ಜಾರಕಿಹೊಳಿ, ಹಿಂದುಳಿದ ವರ್ಗದವರು. ಹಿಂದುಳಿದ ವರ್ಗದವರು ಯಾರು ಬದಕಂಗಿಲ್ಲ ಇಲ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.