ಬೆಳಗಾವಿ:58 ವಾರ್ಡ್ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು 385 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಯುತ್ತಿದೆ.
ಸೆಪ್ಟೆಂಬರ್ 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ 55, ಕಾಂಗ್ರೆಸ್ನಿಂದ 45, ಜೆಡಿಎಸ್ನಿಂದ 11, ಆಮ್ ಆದ್ಮಿ 27, ಎಐಎಂಐಎಂ 7, ಉತ್ತಮ ಪ್ರಜಾಕೀಯ ಪಾರ್ಟಿ 1, ಎಸ್ಡಿಪಿಐ 1 ಹಾಗೂ ಪಕ್ಷೇತರರು 238 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಅಂತಿಮವಾಗಿ ಕಣಕ್ಕಿಳಿದಿದ್ದಾರೆ.
58 ವಾರ್ಡ್ಗೆ ಒಟ್ಟು 519 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 468 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದವು. ನಿನ್ನೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಕೆಲ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ 385 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಬಂಡಾಯ ಅಭ್ಯರ್ಥಿಗಳ ಮನವೊಲಿಸಿದ ಕಡಾಡಿ, ಬೆನಕೆ:ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಬಂಡಾಯ ಅಭ್ಯರ್ಥಿಗಳ ಮನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಶಾಸಕ ಅನಿಲ್ ಬೆನಕೆ ಭೇಟಿ ನೀಡಿ ಮನವೊಲಿಸಿದರು. ಆದರೆ ಕಾಂಗ್ರೆಸ್ ಹಾಗೂ ಎಂಇಎಸ್ಗೆ ಬಂಡಾಯದ ಬಿಸಿ ತಟ್ಟಿದೆ.