ಬೆಳಗಾವಿ:ಕಣ್ಣಿಗೆ ಕಾಣುವ ದೇವರೆಂದರೆ ತಾಯಿ. ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ತಾಯಂದಿರ ದಿನಾಚರಣೆ ಇಂದು. ಕೊರಾನಾ ನಿಯಂತ್ರಣಕ್ಕೆ ಜಿಲ್ಲೆಯ ಹಲವು ಮಹಿಳಾ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ತಮ್ಮ ಸಣ್ಣ ಮಕ್ಕಳು-ಕುಟುಂಬಗಳಿಂದ ದೂರವಾಗಿ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಕುಟುಂಬಕ್ಕಿಂತ ಆರೋಗ್ಯಕರ ಸಮಾಜವೇ ಮುಖ್ಯ ಎನ್ನುವ ಇಂಥ ಅಧಿಕಾರಿಗಳ ಕುರಿತಾಗಿ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಸಿದ್ಧಪಡಿಸಿದ ವಿಶೇಷ ವರದಿ ಇದು.
ಎರಡು ತಿಂಗಳಿಂದ ಮಗಳನ್ನು ಅಪ್ಪಿಕೊಂಡಿಲ್ಲ!
ಬೆಳಗಾವಿ ನಗರ ಹಾಗೂ ತಾಲೂಕಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಬೆಳಗಾವಿ ಕಮಿಷನ್‌ರೇಟ್ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ 47 ಜನ ಸೋಂಕಿತರಿದ್ದು, ಕೊರೊನಾ ನಿಯಂತ್ರಿಸಲು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸೀಮಾ ಲಾಟ್ಕರ್ ಹಗಳಿರಲು ಶ್ರಮಿಸುತ್ತಿದ್ದಾರೆ.
ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್ ಅವರಿಗೆ 10 ಹಾಗೂ 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೊರೊನಾದಿಂದಾಗಿ ಕಳೆದೆರಡು ತಿಂಗಳಿಂದ ತಮ್ಮ ಮಕ್ಕಳನ್ನು ಅಪ್ಪಿಕೊಳ್ಳಲಾಗದ ಪರಿಸ್ಥಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ನಿಮಿಷ ಅವರೊಟ್ಟಿಗೆ ಬೆರತಿಲ್ಲ. ಹಿಂಬಾಗಲಿನಿಂದ ಮನೆಗೆ ಹೋಗಿ ಪ್ರತ್ಯೇಕ ಕೊಠಡಿಯಲ್ಲಿ ಎರಡು ತಿಂಗಳಿಂದ ವಾಸವಿದ್ದಾರೆ.
ಸಾರ್ವಜನಿಕರ ರಕ್ಷಣೆಗಾಗಿ ಹೊರಗಡೆ ಕಾರ್ಯ ನಿರ್ವಹಿಸುತ್ತಿರುವ ಇವರು, ಮನೆಗೆ ಹೋದಾಕ್ಷಣ ಸೆಲ್ಫ ಕ್ವಾರಂಟೈನ್ ಆಗುತ್ತಿದ್ದಾರೆ. ಈ ಕುರಿತು ಈಟಿವಿ ಭಾರತ ಜತೆಗೆ ಮಾತನಾಡಿದ ಸೀಮಾ ಲಾಟ್ಕರ್, ಕಳೆದೆರಡು ತಿಂಗಳಿಂದ ಮಕ್ಕಳಿಂದ ದೂರವಿದ್ದೇನೆ. ಮಕ್ಕಳನ್ನು ಅಪ್ಪಿಕೊಂಡಿಲ್ಲ, ಅವರೊಟ್ಟಿಗೆ ಸಮಯ ಕಳೆದಿಲ್ಲ. ಈ ವಿಚಾರದಲ್ಲಿ ಸಾಕಷ್ಟು ಬೇಜಾರಾಗಿದೆ. ಆದರೆ, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ನಮ್ಮ ಪಾತ್ರ ಮುಖ್ಯವಾಗಿದ್ದು ಕರ್ತವ್ಯ ಪ್ರಜ್ಞೆ ಮೆರೆಯಬೇಕಿದೆ ಎಂದು ಹೇಳಿದ್ದಾರೆ.