ಬೆಳಗಾವಿ:ಹೊಸ ವರ್ಷಕ್ಕೆ ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಕಾರ್ಯಕರ್ತರ ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾಯಾಧೀಶ ಹೇಮಂತ ಕುಮಾರ್ ಆದೇಶ ಹೊರಡಿಸಿದ್ದಾರೆ.
ಅಧಿವೇಶನ ಸಂದರ್ಭದಲ್ಲಿ ಉದ್ಧಟತನ ಪ್ರದರ್ಶಿಸಿದ್ದ 38 ಜನರನ್ನು ಪೊಲೀಸರು ಬಂಧಿಸಿದ್ದರು. ಎಂಇಎಸ್ ಮುಖಂಡ ಶುಭಂ ಶೆಳ್ಕೆ ಹಾಗೂ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಸೇರಿ, ಬಂಧಿತ 38 ಆರೋಪಿಗಳ ಜಾಮೀನು ಅರ್ಜಿ ವಜಾಗೊಂಡಿದೆ. ಜಾಮೀನು ಅರ್ಜಿ ವಜಾಗೊಳಿಸಿ ಬೆಳಗಾವಿಯ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕರಣದಡಿ ಇನ್ನೂ 22 ಆರೋಪಿಗಳ ಬಂಧನಕ್ಕೆ ಬೆಳಗಾವಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಗಲಭೆ: 27 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾ:
ಗಲಭೆ ಪ್ರಕರಣದಡಿ ನಿರೀಕ್ಷಣಾ ಜಾಮೀನು ಕೋರಿ 11 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯೂ ವಜಾಗೊಂಡಿದೆ. ಮಾಜಿ ಮೇಯರ್ ಸರಿತಾ ಪಾಟೀಲ್ ಸೇರಿ 11 ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದನ್ನು ಖಂಡಿಸಿ ಡಿ.17ರಂದು ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಎಂಇಎಸ್, ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಅಧಿವೇಶನಕ್ಕೆ ನಿಯೋಜನೆಗೊಂಡಿದ್ದ ಸರ್ಕಾರಿ ವಾಹನಗಳನ್ನೇ ಟಾರ್ಗೇಟ್ ಮಾಡಿ ಕಲ್ಲೆಸೆದು ಕಾರ್ಯಕರ್ತರು ಪರಾರಿಯಾಗಿದ್ದರು.
ಸರ್ಕಾರದ ಪರ ವಕಾಲತ್ತು ವಹಿಸಿದ್ದ ಅಭಿಯೋಜಕ ಕಿರಣ್ ಪಾಟೀಲ್, ಆರೋಪಿಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಉದ್ದೇಶದಿಂದ ದೊಂಬಿ, ಗಲಾಟೆ ಮಾಡಿದ್ದಾರೆ. ಸಮಾಜ ಘಾತುಕ ಕೃತ್ಯವೆಸಗಿದ್ದು, ಜಾಮೀನಿಗೆ ಅರ್ಹರಲ್ಲ. ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ , ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ, ಕೊಲೆ ಯತ್ನದ ಗಂಭೀರ ಆರೋಪ ಈ ಎಲ್ಲರ ಮೇಲಿದೆ ಎಂದು ವಾದ ಮಂಡಿಸಿದರು.
ಇದನ್ನೂ ಓದಿ:ಗದ್ದಲ ನಡೆಸಿದ ಯಾವುದೇ ಕಿಡಿಗೇಡಿಗಳನ್ನು ಕಾಪಾಡುವುದಿಲ್ಲ.. ಆರಗ ಜ್ಞಾನೇಂದ್ರ ಉತ್ತರ ಧಿಕ್ಕರಿಸಿ ಪ್ರತಿಪಕ್ಷ ಸಭಾತ್ಯಾಗ..