ಬೆಳಗಾವಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಸಂಬಂಧ ಶೀಘ್ರವೇ ಕ್ರಮವಹಿಸಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ ನೀಡಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ದುಃಖದ ವಿಷಯ. ಕರ್ನಾಟಕದಲ್ಲಿ ನಡೆದಿರುವ ಈ ಘಟನೆಯ ಹಿಂದೆ ಖಂಡಿತವಾಗಿಯೂ ದೊಡ್ಡಮಟ್ಟದ ಕೈವಾಡ ಇದೆ. ಸಾವಿನ ಮನೆಯಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿರುವುದು.. ಘಟನೆಯ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸುವುದಾಗಿ ಸಿಎಂ ಬೊಮ್ಮಾಯಿ ಕೂಡ ಹೇಳಿದ್ದಾರೆ. ಕಮಿಷನ್ ಆರೋಪ ವಿಚಾರದ ಬಗ್ಗೆ ಹಲವು ಆಯಾಮಗಳಿವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಈಶ್ವರಪ್ಪ ವಿರುದ್ಧದ ಆರೋಪ ಬಗ್ಗೆ ಮಾಹಿತಿ ಪಡೆಯುತ್ತೇನೆ: ತರಾತುರಿಯಲ್ಲಿ ತೆರಳಿದ ರಾಜ್ಯ ಬಿಜೆಪಿ ಉಸ್ತುವಾರಿ
ಹೈಕಮಾಂಡ್‌ಗೆ ಮಾಹಿತಿ ರವಾನೆ :ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ವರದಿ ನೀಡುವಂತೆ ರಾಜ್ಯ ಪ್ರವಾಸದಲ್ಲಿರುವ ಅರುಣ್ ಸಿಂಗ್‌ಗೆ ಸೂಚಿಸಿದೆ. ಹೀಗಾಗಿ, ಬೆಳಗಾವಿ ವಿಭಾಗ ಮಟ್ಟದ ಬಿಜೆಪಿ ಸಭೆಯಿಂದ ಅರುಣ್ ಸಿಂಗ್ ಹೊರ ಬಂದರು. ಅಲ್ಲಿಂದ ಹೋಟೆಲ್‌ನ ಕೊಠಡಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇಂದು ಮಧ್ಯಾಹ್ನದ ಹೊತ್ತಿಗೆ ಅರುಣ್ ಸಿಂಗ್ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.