ಬೆಳಗಾವಿ :ಜಿಲ್ಲೆಯ ಸವದತ್ತಿ ತಾಲೂಕಿನ ಸುಕ್ಷೇತ್ರ ಯಲ್ಲಮ್ಮನಗುಡ್ಡದ ಮಡಿಲಲ್ಲಿರುವ ಉಗರಗೋಳದ ಯುವಕ ಬುಡನಸಾಬ್ ಹೊಸಮನಿ ಎಲೆಗಳನ್ನು ಸೇವಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ವೃತ್ತಿಯಿಂದ ಗೌಂಡಿ ಆಗಿರುವ ಈತ, ಪ್ರವೃತ್ತಿಯಲ್ಲಿ ಯೋಗಪಟು. ಸಾಹಸ ಮಾಡುವಲ್ಲಿ ಸದಾ ಮುಂದೆ. ಈ ಹಿಂದೆ ಚಲಿಸುತ್ತಿರುವ ಸೈಕಲ್ ಹಾಗೂ ಬೈಕ್ ಮೇಲೆಯೇ ನಿಂತು, ಮಲಗಿ ನಾನಾ ಸಾಹಸ ಮೆರೆದಿದ್ದ. ಇದೀಗ ನಾನಾ ರೀತಿಯ ಸೊಪ್ಪು ಸೇವನೆ ಮೂಲಕ ಗಮನ ಸೆಳೆಯುತ್ತಿದ್ದಾನೆ.
ಉಗರಗೋಳ ಗುಡ್ಡದ ಮೇಲಿರುವ ಪ್ರದೇಶದಲ್ಲೇ ಪುಟ್ಟದಾದ ಮನೆ ಕಟ್ಟಿಕೊಂಡಿರುವ ಬುಡನ್, ತಾನೊಬ್ಬನೇ ಅಲ್ಲಿ ವಾಸಿಸುತ್ತಿದ್ದಾನೆ. ಕತ್ತಲಾದರೆ ಆ ಪ್ರದೇಶಕ್ಕೆ ಹೋಗಲು ಎಂಥವರೂ ಹೆದರುತ್ತಾರೆ. ಆದರೆ, ಈತ ಐದಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾನೆ. ನೈಸರ್ಗಿಕ ಪರಿಸರದಲ್ಲಿ ನೆಮ್ಮದಿಯಿಂದ ದಿನದೂಡುತ್ತಿದ್ದಾನೆ. ಅಲ್ಲದೆ, ಆ ಪರಿಸರದಲ್ಲಿ ಬೆಳೆದು ನಿಂತಿರುವ ಹಲವು ಮರಗಳ ಎಲೆಗಳನ್ನು ತಿನ್ನುತ್ತಿದ್ದಾನೆ.
ಕೇವಲ 3ನೇ ತರಗತಿ ಓದಿರುವ ಈತ, ತಾನು ಹಲವು ವರ್ಷಗಳಿಂದ ಯೋಗಾಸನ ಹಾಗೂ ಸಾಹಸ ಕಲೆ ಪ್ರದರ್ಶಿಸುತ್ತ ಬಂದಿದ್ದೇನೆ. ಈಚೆಗೆ ಜಗತ್ತಿಗೆ ಕೋವಿಡ್ ದಾಂಗುಡಿ ಇಟ್ಟಿದೆ. ಸೋಂಕಿನ ವಿರುದ್ಧ ಸೆಣಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಿರುವುದರಿಂದ ಇಲ್ಲಿರುವ ಎಲ್ಲ ತಪ್ಪಲುಗಳನ್ನು ತಿನ್ನುತ್ತಿದ್ದೇನೆ. ಆದರೆ, ಅವುಗಳ ಹೆಸರು ಗೊತ್ತಿಲ್ಲ ಎನ್ನುತ್ತಾನೆ ಬುಡನಸಾಬ್ ಹೊಸಮನಿ.